ಬೆಂಗಳೂರು:- ದೀಪಾವಳಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ಪಟಾಕಿ ಸಿಡಿಸಲು ಬಿಬಿಎಂಪಿಯಿಂದ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ಮೇರೆಗೆ ಬಿಬಿಎಂಪಿ ಮಾರ್ಗಸೂಚಿ ಪ್ರಕಟಿಸಿದೆ. ಸ್ಫೋಟಕ ಪಟಾಕಿಗಳನ್ನು ಸಿಡಿಸುವುದು ಸಂಪೂರ್ಣ ನಿಷೇಧಿಸಿದ್ದು, ಹಸಿರು ಪಟಾಕಿ ಮಾತ್ರ ಸಿಡಿಸುವಂತೆ ಸಾರ್ವಜನಿಕರಿಗೆ ಮಾಲಿನ್ಯ ಮಂಡಳಿ ಮನವಿ ಮಾಡಿದೆ. ಅಕ್ಟೋಬರ್ 31ರಿಂದ ನವೆಂಬರ್ 2ರ ವರೆಗೆ ಮೂರು ದಿನ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ.
ಈ ಮೂರು ದಿನಗಳಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆ ಅವಧಿಯಲ್ಲಿ ಮಾತ್ರ ಹಸಿರು ಪಟಾಕಿ ಸಿಡಿಸಬೇಕು. ಅದರ ಹೊರತಾಗಿ ಬೇಕಾಬಿಟ್ಟಿ ಪಟಾಕಿ ಸಿಡಿಸುವುದಕ್ಕೆ ಕೆಎಸ್ಪಿಸಿಬಿ ಸೂಚನೆಯಂತೆ ಪಾಲಿಕೆ ನಿಷೇಧಿಸಿದೆ.
ಅನಗತ್ಯವಾಗಿ ಪಟಾಕಿ ಮನೆ ಹಾಗೂ ಇತರೆ ಜಾಗದಲ್ಲಿ ಶೇಖರಣೆ ಮಾಡದಂತೆಯೂ ಸೂಚನೆ ನೀಡಲಾಗಿದೆ. ಆನ್ಲೈನ್ನಲ್ಲೂ ಬೇಕಾಬಿಟ್ಟಿ ಸ್ಫೋಟಕ ಪಟಾಕಿ ಮಾರಾಟ ಮಾಡದಂತೆ ತಾಕೀತು ಮಾಡಲಾಗಿದೆ.