ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತನ್ನ ಎರಡನೇ ಪತ್ನಿಯೊಂದಿಗೆ ಅಕ್ರಮವಾಗಿ ವಾಸವಾಗಿದ್ದ ಬಾಂಗ್ಲಾದೇಶದ ಪ್ರಜೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಹಮಾನ್ ಶೈಕ್ (38) ಬಂಧಿತ ಆರೋಪಿಯಾಗಿದ್ದು, ಕಳೆದ 8 ವರ್ಷಗಳಿಂದ ಬೆಂಗಳೂರಿನ ಚನ್ನಸಂದ್ರದಲ್ಲಿ ನೆಲೆಸಿದ್ದ. ಕಸ ವಿಂಗಡಣೆ ಘಟಕದಲ್ಲಿ ಕೆಲಸ ಮಾಡುತ್ತಿದ್ದ.
ತನ್ನ ಜನ್ಮ ಪ್ರಮಾಣ ಪತ್ರವನ್ನು ನಕಲಿ ಮಾಡಿ, ನಕಲಿ ಪ್ರಮಾಣ ಪತ್ರದಲ್ಲಿ ತಾನು ಪಶ್ಚಿಮ ಬಂಗಾಳದಲ್ಲಿ ಜನಿಸಿದ್ದಾಗಿ ಬರೆದುಕೊಂಡಿದ್ದ.ನಕಲಿ ಆಧಾರ್ ಕಾರ್ಡ್, ನಕಲಿ ಗುರುತಿನ ಚೀಟಿ, ಚಾಲನಾ ಪರವಾನಗಿಯನ್ನೂ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿರುವ ರಹಮಾನ್ ಶೈಕ್ ಮೊದಲ ಪತ್ನಿ ತನ್ನ ಪತಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು. ತನ್ನ ಪತಿ ವೈದ್ಯಕೀಯ ವೀಸಾ ಮೇಲೆ ಭಾರತಕ್ಕೆ ತೆರಳಿದ್ದು, ಬಳಿಕ ಹಿಂದಿರುಗಿಲ್ಲ ಎಂದು ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಬಾಂಗ್ಲಾ ಪೊಲೀಸರು ಭಾರತದ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಬೆಂಗಳೂರು ಪೊಲೀಸರು ರಹಮಾನ್ ಶೈಕ್ ನನ್ನು ಕಳೆದ ವರ್ಷ ಬಂಧಿಸಿದ್ದರು. ಆದರೆ ವೈದ್ಯಕೀಯ ಕಾರಣ ಹೇಳಿ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಇದೀಗ ಕಾಡುಗೋಡಿ ಪೊಲೀಸರು ಹಾಗೂ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ ಅಧಿಕಾರಿಗಳು ರಹಮಾನ್ ಶೈಕ್ ನನ್ನು ಅರೆಸ್ಟ್ ಮಾಡಿದ್ದಾರೆ.