ಬೆಂಗಳೂರು :- ಒಳ ಮೀಸಲಾತಿ ಜಾರಿಗೆ ನಮ್ಮ ವಿರೋಧ ಇಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಪರಿಶಿಷ್ಟ ವರ್ಗದ ಎಲ್ಲರೂ ಸಮಾನವಾಗಿ ಅಭಿವೃದ್ಧಿಯಾಗಬೇಕು ಎಂಬ ದೃಷ್ಟಿಯಿಂದ ಒಳಮೀಸಲಾತಿ ಜಾರಿಗೆ ಒಪ್ಪಿದ್ದೇವೆ ಎಂದರು.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಹೆಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಮತ್ತು ನಾನು ಒಳಮೀಸಲಾತಿಗೆ ವಿರುದ್ಧವಾಗಿದ್ದಾರೆ, ಸಹಕರಿಸುತ್ತಿಲ್ಲ ಎಂದು ಕೆಲ ಕಿಡಿಗೇಡಿಗಳು ಆರೋಪಿಸುತ್ತಿದ್ದಾರೆ. ಅನವಶ್ಯಕವಾಗಿ ನಮ್ಮ ಹೆಸರುಗಳನ್ನು ತರುವುದು ಸರಿಯಲ್ಲ. ಒಳಮೀಸಲಾತಿ ವಿಚಾರವಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ನೇರವಾಗಿ ಚರ್ಚಿಸಿದ್ದೇನೆ.
ಹೆಚ್.ಸಿ.ಮಹದೇವಪ್ಪ ಸೇರಿದಂತೆ ಅನೇಕರೊಂದಿಗೆ ಮಾತನಾಡಿದ್ದೇನೆ. ಒಳಮೀಸಲಾತಿ ಜಾರಿಗೆ ವಿರುದ್ಧವಾಗಿದ್ದೇವೆ ಎಂದು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದುದು. ಇನ್ನು ಮುಂದಾದರೂ ಈ ರೀತಿಯಾಗಿ ಮಾತನಾಡುವುದನ್ನು ನಿಲ್ಲಿಸಲಿ ಎಂದು ಹೇಳಿದರು.