ಬೆಂಗಳೂರು: ಶಕ್ತಿ ಯೋಜನೆ ಪರಿಷ್ಕರಣೆ ಮಾಡಬೇಕು ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಚರ್ಚೆ ಮಾಡಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಶಕ್ತಿ ಯೋಜನೆ ಪರಿಷ್ಕರಣೆ ಮಾಡಬೇಕು ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಚರ್ಚೆ ಮಾಡಿಲ್ಲ. ಕ್ಯಾಬಿನೆಟ್ ಇರಲಿ. ಬೇರೆ ವೇದಿಕೆ ಇರಲಿ ಶಕ್ತಿ ಯೋಜನೆ ನಿಲ್ಲಿಸೋ ಬಗ್ಗೆ ಚರ್ಚೆ ಮಾಡಿಲ್ಲ.
ಯಾರೋ ಅದನ್ನ ಗಮನಕ್ಕೆ ತಂದಿದ್ರೆ ಅದನ್ನ ಹೇಳಿರಬಹುದು. ಪರ ವಿರೋಧ ಯಾವಾಗಲೂ ಇರುತ್ತದೆ. ನನಗೂ ಖಾಸಗಿಯಾಗಿ ಮಾತಾಡೋವಾಗ. ಯಾಕೇ ಬೇಕಿತ್ತು, ಎಲ್ಲರಿಗೂ ಯಾಕೆ ಕೊಡ್ತಿರಿ, ಬಡವರಿಗೆ 2000 ರೂ ಕೊಡಿ ಕೇಳ್ತಿರ್ತಾರೆ. ಆದರೆ ಗ್ಯಾರಂಟಿ ನಿಲ್ಲಿಸೋ ಚರ್ಚೆ ಸರ್ಕಾರದ ಬಳಿ ಇಲ್ಲ ಎಂದರು.
ಇನ್ನೂ ವಕ್ಫ್ ಆಸ್ತಿ ವಿವಾದ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಪರಭಾರೆ ಮಾಡಬಾರದು. ಬೇರೆ ಜಿಲ್ಲೆಯಲ್ಲೂ ಇದೇ ರೀತಿ ಪ್ರಶ್ನೆ ಇದೆ. ಅದಷ್ಟು ಶೀಘ್ರವಾಗಿ ಇದನ್ನ ಪರಿಹರಿಸಲಾಗುತ್ತೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಎಲ್ಲಾ ಡಿಸಿಗೂ ಸೂಚನೆ ಕೊಟ್ಟಿದ್ದಾರೆ. ಯಾವುದಕ್ಕೂ ನೋಟಿಸ್ ಕೊಡಬಾರದು, ಮುಂದುವರಿಯಬಾರದು ಎಂದು ಹೇಳಿದ್ದಾರೆ.
ಜಮೀರ್ ವಿರುದ್ಧ ಈ ವಿಚಾರವಾಗಿ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ ಮಾಡಲಿ. ವಿರೋಧ ಪಕ್ಷವಾಗಿ ಅವರು ಇರೋದೇ ಪ್ರತಿಭಟನೆ ಮಾಡಲಿಕ್ಕೆ. ಅವರು ಮಾಡೋದು ಮಾಡಲಿ, ನಾವು ಮಾಡೋದನ್ನ ನಾವು ಮಾಡುತ್ತೇವೆ. ಆಡಳಿತಾತ್ಮಕವಾಗಿ ರೈತ ಸಮುದಾಯಕ್ಕೆ ತೊಂದರೆಯಾಗದ ರೀತಿಯಲ್ಲಿ ನಾವು ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.