ಆತ್ಮೀಯ ಕನ್ನಡಿಗರೇ, `ಕರ್ನಾಟಕ’ ಎಂಬ ಒಂದು ಶಬ್ದದಲ್ಲಿ ಎಂಥಹ ಅದ್ಭುತವಾದ ಮಾಂತ್ರಿಕ ಶಕ್ತಿ ತುಂಬಿದೆ ಎಂಬುದನ್ನು ತಿಳಿಯೋಣ. ಕರ್ನಾಟಕದ ಅನೇಕ ಅರಸರು ಆಳಿ ಹೋದರು, ಕವಿಗಳು ಹೋದರು, ಸಂಪತ್ತು ಹೋಯಿತು, ವೈಭವವೂ ಹೋಯಿತು, ಆದರೆ `ಕರ್ನಾಟಕ’ ಎಂಬ ಶಬ್ದ ಮಾತ್ರ ಅಚ್ಚಳಿಯದೇ ಉಳಿದಿದೆ. ಅದು ದ್ರೌಪದಿಯ ಅಕ್ಷಯ ಪಾತ್ರೆಯ ಅಗುಳಿನಂತಿರುತ್ತದೆ. ಶ್ರೀ ಕೃಷ್ಣ ಪರಮಾತ್ಮನ ಕೃಪೆಯಿಂದ ನಾವು ಇದೊಂದು ಅಗುಳಿನಿಂದ ಸಾವಿರಾರು ಜನರ ಹಸಿವೆಯನ್ನು ಇಂಗಿಸಬಹುದು. ನಮ್ಮ ಕನ್ನಡ ಭಾಷೆಯು ಸುಮಾರು 2 ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಕನ್ನಡ ನಾಡು-ನುಡಿ, ವೇಷ -ಭಾಷೆ, ಸಂಸ್ಕೃತಿ-ಸಂಸ್ಕಾರ ವೈಶಿಷ್ಟತೆಯ ನೆಲೆಬೀಡಾಗಿದೆ. ಕವಿ ಮಹಲಿಂಗರಂಗರು ಕನ್ನಡ ಭಾಷೆಯ ಸೊಬಗು, ಭಾಷೆಯ ವಿಶೇಷತೆ, ಸರಳತೆಯನ್ನು ತುಂಬಾ ಅಚ್ಚುಕಟ್ಟಾಗಿ ವಿವರಿಸಿದ್ದಾರೆ.
`ಸುಲಿದ ಬಾಳೆಯ ಹಣ್ಣಿನಂದದಿ
ಕಳಿದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮೋಕ್ಷವ
ಗಳಿಸಿಕೊಂಡರೆ ಸಾಲದೇ ಸಂಸ್ಕೃತದಲಿನ್ನೇನು”
ಎಂದು ಕನ್ನಡ ಭಾಷೆಯ ಧೀಮಂತಿಕೆ, ಶ್ರೀಮಂತಿಕೆ ಎಂತಹದ್ದು ಎಂದಿದ್ದಾರೆ. ಕನ್ನಡದಲ್ಲಿ ಇಲ್ಲದೆ ಇರುವಂತಹದ್ದು ಸಂಸ್ಕೃತದಲ್ಲಿ, ಅನ್ಯ ಭಾಷೆಗಳಲ್ಲಿ ಅಂತಹ ವಿಶೇಷತೆ ಏನಿದೆ? ಕನ್ನಡ ಭಾಷೆ ಸರಳ, ಸುಂದರ, ಸುಲಲಿತವಾಗಿದೆ ಎಂದು ಮಹಲಿಂಗರಂಗರು ಮನೋಜ್ಞವಾಗಿ ತಿಳಿಸಿದ್ದಾರೆ.
ಸಾವಿರಾರು ವರ್ಷಗಳಿಂದ ಸಾಂಸ್ಕೃತಿಕವಾಗಿ ಹಾಗೂ ರಾಜಕೀಯವಾಗಿ ತನ್ನದೇ ಆದ ಪರಂಪರೆಯನ್ನು ಹೊಂದಿರುವ ಕರ್ನಾಟಕ ರಾಜ್ಯ ಇಂದಿನ ರೂಪುರೇಷೆಯನ್ನು ಪಡೆಯಲು ದೀರ್ಘವಾದ ಏಕೀಕರಣ ಹೋರಾಟವನ್ನೇ ನಡೆಸಿದೆ. ಕನ್ನಡ ನಾಡು ಎಲ್ಲ ಕಾಲದಲ್ಲಿಯೂ ನಿರ್ದಿಷ್ಟವಾದ ಗಡಿಯನ್ನು ಹೊಂದಿರದೆ, ಇದರ ವಿಸ್ತಾರ ಮತ್ತು ವ್ಯಾಪ್ತಿಯು ರೂಪಾಂತರಗಳನ್ನು ಹೊಂದುತ್ತ ಹೋಗಿರುವುದನ್ನು ಕಾಣಬಹುದು.
ಬಾದಾಮಿ ಚಾಲುಕ್ಯರಿಂದ ಹಿಡಿದು ವಿಜಯನಗರ ಸಾಮ್ರಾಜ್ಯ ನಾಶವಾದ ನಂತರ ಕರ್ನಾಟಕ ವಿಭಾಗವಾಯಿತು.
ಬ್ರಿಟಿಷರ `ಒಡೆದು ಆಳುವ ನೀತಿ’ಯಿಂದಾಗಿ ಕರ್ನಾಟಕದ ಪ್ರಾಂತಗಳು ಹಾಗೂ ಕನ್ನಡದ ಭಾಷಿಕ ಜನರು 20 ಆಡಳಿತ ಭಾಗಗಳಲ್ಲಿ ಹರಿದು ಹಂಚಿ ಹೋಗಿದ್ದರು. ಪರಕೀಯ ಆಳ್ವಿಕೆಗೆ ಒಳಪಟ್ಟ ಕನ್ನಡಿಗರು ಅನ್ಯ ಭಾಷೆ, ಅನ್ಯ ಸಂಸ್ಕೃತಿ, ಆಚಾರ-ವಿಚಾರಗಳನ್ನು ಅನುಸರಿಸಬೇಕಾಯಿತು.
ಬಾಂಬೆ ಸಂಸ್ಥಾನದಲ್ಲಿ ಮರಾಠಿ ಆಡಳಿತ ಭಾಷೆಯಾದರೆ, ಹೈದರಾಬಾದ್ ಸಂಸ್ಥಾನದಲ್ಲಿ ಉರ್ದು, ಮದ್ರಾಸ್ ಸಂಸ್ಥಾನದಲ್ಲಿ ತಮಿಳು ಆಡಳಿತ ಭಾಷೆ ಮತ್ತು ಶಿಕ್ಷಣ ಮಾಧ್ಯಮದ ಭಾಷೆಯಾಗಿತ್ತು. ಇಂತಹ ಶೋಚನೀಯ ಸ್ಥಿತಿಯಿಂದ ಕನ್ನಡಿಗರನ್ನು ಮುಕ್ತಗೊಳಿಸಿ ಒಂದುಗೂಡಿಸುವ ಹೋರಾಟವೇ `ಕರ್ನಾಟಕ ಏಕೀಕರಣ’ ಚಳುವಳಿಯಾಗಿದೆ.
ಕರ್ನಾಟಕ ಏಕೀಕರಣದ ರೂವಾರಿ ಎಂದೇ ಖ್ಯಾತರಾದ ಆಲೂರು ವೆಂಕಟರಾಯರು 1917ರಲ್ಲಿ ಅಂದಿನ ಕರ್ನಾಟಕದ ದುಸ್ಥಿತಿಯನ್ನು ಕುರಿತು ಛೇ ಕರ್ನಾಟಕವೆಲ್ಲಿದೆ ಎಂದು ಉದ್ಗರಿಸಿದರು. ವೆಂಕಟರಾಯರು `ಕರ್ನಾಟಕದ ಗತ ವೈಭವ’ ಎಂಬ ಗ್ರಂಥ ರಚಿಸಿ, ಅದರಲ್ಲಿ ಕರ್ನಾಟಕದ ಪುರಾತನ ಇತಿಹಾಸ, ಕನ್ನಡಿಗರ ಸಾಹಸ, ಕನ್ನಡ ನಾಡಿನ ಪರಂಪರೆಯನ್ನು ಕುರಿತು ಹೇಳಿದರು. ಈ ಕೃತಿಯಿಂದ ಪ್ರಭಾವಿತರಾದ ಕನ್ನಡಿಗರು ಸಕ್ರಿಯವಾಗಿ ಆಂದೋಲನದಲ್ಲಿ ಪಾಲ್ಗೊಳ್ಳುವಂತಾಯಿತು.
ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮತ್ತೊಬ್ಬ ವ್ಯಕ್ತಿ ಬೆನಗಲ್ ರಾಮರಾಯರು ‘ಸುಹಾಸಿನಿ’ ಮಾಸಪತ್ರಿಕೆಯಲ್ಲಿ ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ನಾಡಗೀತೆಯು ಕನ್ನಡಿಗರ ಮಂತ್ರವಾಯಿತು. ಬಿಎಂಶ್ರೀ, ಗೋವಿಂದ ಪೈ, ಬೇಂದ್ರೆ, ಅನಕೃ, ಕುವೆಂಪು, ಹೀಗೆ ಅನೇಕ ಸಾಹಿತಿಗಳ ಗೀತೆಗಳು ಮತ್ತು ಲೇಖನಗಳು ಪ್ರಕಟವಾದವು. ಹಲವಾರು ಪತ್ರಿಕೆಗಳು ಜ್ಞಾನಭೋದಕ, ಕರ್ನಾಟಕ ಪತ್ರ, ಚಂದ್ರೋದಯ, ಧನಂಜಯ, ಕರ್ನಾಟಕ ವೃತ್ತ, ರಾಜಹಂಸ, ವಾಗ್ಭೂಷಣ, ವಾಗ್ದೇವಿ, ವಿಜಯ, ಶುಭೋದಯ, ಕರ್ಮವೀರ, ಕನ್ನಡ ನುಡಿ, ಪ್ರಬುದ್ಧ ಕರ್ನಾಟಕ ಇತ್ಯಾದಿ ಪತ್ರಿಕೆಗಳು ನಾಡಿನ ಏಕೀಕರಣಕ್ಕೆ ತನ್ನದೇ ಆದ ವಿಶಿಷ್ಟ ಲೇಖನ, ಕಾವ್ಯಗಳನ್ನು ಪ್ರಕಟಿಸುವ ಮೂಲಕ ತಮ್ಮ ಕಾಣಿಕೆ ನೀಡಿದವು.
1890ರಲ್ಲಿ “ಕರ್ನಾಟಕ ವಿದ್ಯಾವರ್ಧಕ ಸಂಘ”ವು ಧಾರವಾಡದಲ್ಲಿ ಸ್ಥಾಪನೆಯಾಯಿತು. ನಂತರ 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿ ಆರಂಭವಾಯಿತು. 1916 ರಲ್ಲಿ “ಕರ್ನಾಟಕ ಸಭಾ” ಇತ್ಯಾದಿ ಸಂಘಟನೆಗಳು ಜನ ಜಾಗೃತಿ ಮೂಡಿಸಲು ಶ್ರಮಿಸಿದವು. 1924ರಲ್ಲಿ ಬೆಳಗಾವಿಯಲ್ಲಿ ಜರುಗಿದ “ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ”ದಲ್ಲಿ “ಕರ್ನಾಟಕ ಏಕೀಕರಣ”ದ ಬಗ್ಗೆ ತೀವ್ರ ಚರ್ಚೆ ನಡೆಸಿ ಮೊದಲ ಬಾರಿಗೆ ಅಧಿವೇಶನ ನಡೆಸಿದರು. ಇದರ ಅಧ್ಯಕ್ಷತೆಯನ್ನು ಸರ್ ಸಿದ್ದಪ್ಪ ಕಂಬಳಿಯವರು ವಹಿಸಿಕೊಂಡಿದ್ದರು.
“ಕರ್ನಾಟಕ ಏಕೀಕರಣ ಸಭಾ” ಕೆಲಕಾಲದ ನಂತರ “ಕರ್ನಾಟಕ ಏಕೀಕರಣ ಸಂಘ” ಎಂದು ಪುನರ್ ನಾಮಕರಣ ಪಡೆಯಿತು. ಇದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯೊಂದಿಗೆ ಜೊತೆಯಾಗಿ ಏಕೀಕರಣ ಚಳುವಳಿಯನ್ನು ಮುಂದುವರಿಸಿತು. 1926ರಲ್ಲಿ ಹಿಂದುಸ್ತಾನಿ ಸೇವಾದಳವು ಏಕೀಕರಣಕ್ಕಾಗಿ ಸಹಿ ಸಂಗ್ರಹ ಅಭಿಯಾನ ನಡೆಸಿ ಸುಮಾರು 36,000 ಸಹಿ ಸಂಗ್ರಹಿಸುವ ಮೂಲಕ ಈ ಹೋರಾಟಕ್ಕೆ ಬೆಂಬಲ ನೀಡಿದವು.
1928ರಲ್ಲಿ ಕೇಂದ್ರ ಸರ್ಕಾರ ಕನ್ನಡಿಗರ ಅಹವಾಲನ್ನು ಸರಿಪಡಿಸಲು ‘ನೆಹರು ಸಮಿತಿ’ ಯನ್ನು ನೇಮಿಸಿತು.
“ಕರ್ನಾಟಕ ಏಕೀಕರಣ ಸಂಘ” ಮತ್ತು “ಪ್ರದೇಶ ಕಾಂಗ್ರೆಸ್ ಸಮಿತಿ” ಗಳೆರಡು ನೆಹರು ಆಯೋಗದ ಮುಂದೆ ತಮ್ಮ ಬೇಡಿಕೆಗಳನ್ನು ಇಟ್ಟವು.
1937ರಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಏಕೀಕರಣ ತನ್ನ ಗುರಿ ಎಂದು ನಿರ್ಧರಿಸಿತು. ಆದರೆ ಅನೇಕ ಆಡಳಿತಗಳಿಗೊಳಪಟ್ಟ ಕರ್ನಾಟಕವನ್ನು ಒಂದುಗೂಡಿಸುವ ಕಾರ್ಯ ಸರಳವಾಗಿರಲಿಲ್ಲ. ಯಾವ ಸ್ಥಾನಿಕ ಅರಸರು ತಮ್ಮ ಅಧಿಕಾರವನ್ನು ಬಿಟ್ಟುಕೊಡಲು ಸಿದ್ಧರಿರಲಿಲ್ಲ. 1946 ರ ಅಂತ್ಯದ ವೇಳೆಗೆ ಬ್ರಿಟಿಷರು ಭಾರತವನ್ನು ಬಿಡುವುದು ಬಹುತೇಕ ಖಚಿತವಾಯಿತು. 1953 ರಂದು ಪ್ರತ್ಯೇಕ ಆಂದ್ರ ನಿರ್ಮಾಣವಾದ ಮೇಲೆ ಮದ್ರಾಸ್ ಪ್ರಾಂತ್ಯದಲ್ಲಿ ಸೇರಿದ್ದ ಬಳ್ಳಾರಿಯನ್ನು ಯಾವ ಕಡೆ ಸೇರಿಸಬೇಕೆಂಬ ಸಮಸ್ಯೆ ಬಂತು. ಆಗ ಜಸ್ಟಿಸ್ ವಾಂಚೂ ಸಮಿತಿಯು ಬಳ್ಳಾರಿ ಸೇರಿದಂತೆ ಜಿಲ್ಲೆಯ ಆದವಾನಿ, ಆಲೂರು, ರಾಮದುರ್ಗ ತಾಲೂಕುಗಳನ್ನು ಆಂಧ್ರಕ್ಕೂ. ಬಳ್ಳಾರಿ ಸೇರಿದಂತೆ ಉಳಿದ ತಾಲೂಕುಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡೆ ಮಾಡಲಾಯಿತು.
ಏಕೀಕರಣವನ್ನು ಒತ್ತಾಯಿಸಿ ಈಗಿನ ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಅಂದಾನಪ್ಪ ದೊಡ್ಡಮೇಟಿ ಅವರು ಆಮರಣಾಂತ ಉಪವಾಸ ಕೈಗೊಂಡರು. 1953 ಡಿಸೆಂಬರ್ 29ರಲ್ಲಿ ಕೇಂದ್ರ ಸರ್ಕಾರ “ರಾಜ್ಯ ಪುನರ್ವಿಂಗಡನ ಆಯೋಗ” ಸ್ಥಾಪಿಸಿ, ಕೇಂದ್ರ ಸರ್ಕಾರವು ಫಜಲ್ ಅಲಿ ಆಯೋಗದ ಶಿಫಾರಸ್ಸುಗಳನ್ನು ಕೆಲವೊಂದು ತಿದ್ದುಪಡಿಗಳೊಂದಿಗೆ ವಿಶಾಲ ಮೈಸೂರು ರಾಜ್ಯ ನವೆಂಬರ್ 1, 1956ರಂದು ಅಸ್ತಿತ್ವಕ್ಕೆ ಬಂದಿತು.
– ಈಶ್ವರ ಕುರಿ (ಜಕ್ಕಲಿ)
9 ಜಿಲ್ಲೆಗಳನ್ನೊಳಗೊಂಡ ಹಳೆಯ ಮೈಸೂರು ಸಂಸ್ಥಾನ, ಮದ್ರಾಸ್ ಪ್ರಾಂತದಿಂದ ದಕ್ಷಿಣ ಕನ್ನಡ, ಕೊಡಗು, ಕೊಳ್ಳೇಗಾಲ ಮತ್ತು ಬಳ್ಳಾರಿ. ಹೈದರಾಬಾದ್ ಪ್ರಾಂತದಿಂದ ರಾಯಚೂರು, ಬೀದರ್, ಗುಲ್ಬರ್ಗಗಳು. ಬಾಂಬೆ ಪ್ರಾಂತದಿಂದ ಬೆಳಗಾಂ, ಧಾರವಾಡ, ಬಿಜಾಪುರ, ಉತ್ತರ ಕನ್ನಡ. ಸ್ವತಂತ್ರ ಆಡಳಿತ ನಡೆಸುತ್ತಿದ್ದ ಸಂಸ್ಥಾನಗಳಿಂದ ಸಂಡೂರು, ಜಮಖಂಡಿ, ಮುದ್ದೇಬಿಹಾಳ ಮತ್ತು ಸವಣೂರುಗಳು ಸೇರಿ 1,91,756 ಚ. ಕಿ. ಮೀ. ಭೂ ಪ್ರದೇಶವು ವಿಶಾಲ ಮೈಸೂರು ರಾಜ್ಯ ಎಂದು ಅಸ್ತಿತ್ವಕ್ಕೆ ಬಂತು. ತದನಂತರ 1973ರ ನವೆಂಬರ್ 1ರಂದು ಕರ್ನಾಟಕ ರಾಜ್ಯ ಎಂದು ದೇವರಾಜ್ ಅರಸು ಅವರ ಕಾಲದಲ್ಲಿ ಮರು ನಾಮಕರಣವಾಯಿತು.