ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ದೀಪಾವಳಿ ಹಬ್ಬದ ಸಂಭ್ರಮ ತಾಲೂಕಿನೆಲ್ಲೆಡೆ ಕಂಡುಬರುತ್ತಿದೆ. ಹಬ್ಬದ ಪ್ರಯುಕ್ತ ನರಕಚತುರ್ದಶಿ ದಿನವಾದ ಗುರುವಾರ ಪಟ್ಟಣದಲ್ಲಿ ಬಹುತೇಕ ಮನೆಗಳಲ್ಲಿ ನಸುಕಿನಲ್ಲಿಯೇ ಕುಟುಂಬ ವರ್ಗದವರಿಗೆ ಆರತಿ ಮಾಡಿ ನಂತರ ಅಭ್ಯಂಗ ಸ್ನಾನ ಮಾಡುವದು ಕಂಡುಬಂದಿತು.
ಕೃಷ್ಣ ಪರಮಾತ್ಮ ನರಕಾಸುರನ್ನು ವಧೆ ಮಾಡಿದ ಸಂಕೇತವಾಗಿ ನರಕಚತುರ್ದಶಿಯನ್ನು ಆಚರಿಸುತ್ತಾರೆ.
ವಿಜಯದ ಸಂಕೇತವಾಗಿ ದೀಪಗಳನ್ನು ಬೆಳಗಿಸುವದು, ಅದೇ ರೀತಿ ಎಲ್ಲರ ಮನೆಯಲ್ಲಿ ಕುಟುಂಬವರ್ಗದ ಶ್ರೇಯೋಭಿವೃದ್ಧಿಗಾಗಿ ಆರತಿ ಮಾಡುವದು, ನಂತರ ಅಭ್ಯಂಗ ಸ್ನಾನ ಮಾಡುವ ಮೂಲಕ ನರಕಚತುರ್ದಶಿಯನ್ನು ಆಚರಿಸುತ್ತಾರೆ. ಹಿಂದಿನ ನೀರು ತುಂಬುವ ಹಬ್ಬವನ್ನು ಆಚರಿಸಿ ಮರುದಿನ ಸೂರ್ಯೋದಯಕ್ಕೂ ಮುನ್ನ ಎಲ್ಲರ ಮನೆಯ ಬಾಗಿಲಿಗೆ ದೀಪಗಳನ್ನು ಬೆಳಗಿಸಿ ನಂತರ ಮನೆಮಂದಿಗೆಲ್ಲ ಆರತಿ ಮಾಡುವದು ಸಂಪ್ರದಾಯವಾಗಿದ್ದು, ಮನೆಮಂದಿಗೆ ಆರತಿ ಮಾಡುವ ಮೊದಲು ತುಳಸಿದೇವಿಗೂ ಆರತಿ ಬೆಳಗುವದು ವಾಡಿಕೆಯಾಗಿದೆ.
ಪಟ್ಟಣದಲ್ಲಿ ಹತ್ತಾರು ಗ್ರಾಮಗಳಿಂದ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲು ಲಕ್ಷ್ಮೇಶ್ವರದ ಪೇಟೆಗೆ ದೌಡಾಯಿಸಿದ್ದರಿಂದ 2-3 ದಿನಗಳಿಂದ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ವಿವಿಧ ವಸ್ತುಗಳನ್ನು ಖರೀದಿಸುವ ಕಾತರತೆಯಲ್ಲಿ ಜನರು ಪೇಟೆಯಲ್ಲಿ ಜಮಾಯಿಸಿದ್ದರು. ಬಟ್ಟೆ, ಗೃಹಪಯೋಗಿ ವಸ್ತುಗಳು, ಕಿರಾಣಿ ಅಂಗಡಿಗಳು ಜನರಿಂದ ತುಂಬಿಕೊಂಡಿದ್ದವು. ಪೇಟೆಯಲ್ಲಿ ಎಲ್ಲೆಂದರಲ್ಲಿ ಜನರ ದಂಡು ಕಂಡು ಬರುತ್ತಿತ್ತು.
ದುಬಾರಿ ದುನಿಯಾದ ನಡುವೆಯೂ ಜನರು ಅಗತ್ಯ ವಸ್ತುಗಳನ್ನು ಕೊಳ್ಳುತ್ತಿದ್ದರು. ಅಲ್ಲದೆ ಹಣತೆಗಳನ್ನು ಕೊಳ್ಳಲು ಸಹ ಸಾಕಷ್ಟು ಮಹಿಳೆಯರು ಹಣತೆ ಮಾರಾಟ ಮಾಡುವವರ ಹತ್ತಿರ ಚೌಕಾಸಿ ಮಾಡಿ ದೇಶಿ ಮತ್ತು ವಿದೇಶಗಳಿಂದ ಆಮದು ಮಾಡಿಕೊಳ್ಳಲಾದ ಹಣತೆಗಳನ್ನು ಕೊಳ್ಳುತ್ತಿದ್ದರು.
ತಪ್ಪಿದ ಟ್ರಾಫಿಕ್ ಕಿರಿಕಿರಿ
ಪ್ರತಿವರ್ಷ ಹಬ್ಬಕ್ಕೆ ಪೇಟೆಯ ಅಕ್ಕಪಕ್ಕದಲ್ಲಿಯೇ ಕಬ್ಬು, ಬಾಳೆಕಂಬಗಳನ್ನು ಮಾರಾಟ ಮಾಡಲಾಗುತ್ತಿತ್ತು. ಇದರಿಂದಾಗಿ ಟ್ರಾಫಿಕ್ ಕಿರಿಕಿರಿ ಉಂಟಾಗುವುದರ ಜೊತೆಗೆ ಸಾಕಷ್ಟು ಕಸಕಡ್ಡಿ ಜನ ಓಡಾಡುವ ದಾರಿಯಲ್ಲಿ ಬೀಳುತ್ತಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪುರಸಭೆ ಮತ್ತು ಪೊಲೀಸ್ ಇಲಾಖೆ ದಿಟ್ಟ ನಿರ್ಧಾರ ತೆಗೆದುಕೊಂಡು ಕಳೆದ 2 ವರ್ಷಗಳಿಂದ ಊರ ಹೊರಗಿನ ಇಟ್ಟಿಗೆರೆ ಕೆರೆ ದಂಡೆಯ ಮೇಲೆ ಕಬ್ಬು ಮತ್ತು ಬಾಳೆಕಂಬಗಳ ಮಾರಾಟದ ವ್ಯವಸ್ಥೆ ಮಾಡಿದ್ದರಿಂದ ಸಂಚಾರ ವ್ಯವಸ್ಥೆಗೆ ಯಾವುದೇ ತೊಡಕು ಉಂಟಾಗಲಿಲ್ಲ.