ವಿಜಯಸಾಕ್ಷಿ ಸುದ್ದಿ, ಗದಗ : ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿತ್ತು. ಮನೆ ಮಂದಿಯೆಲ್ಲ ನೂತನ ವಸ್ತç ಧರಿಸಿದರೆ, ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ದೀಪಾವಳಿ ಹಬ್ಬದ ಆಚರಣೆಗಾಗಿ ಬೆಳಗಿನಿಂದಲೇ ಜನರು ಸಿದ್ಧತೆಯಲ್ಲಿ ತೊಡಗಿದ್ದರು. ಅಮವಾಸ್ಯೆ ಅಂಗವಾಗಿ ನಗರದ ಪುಟ್ಟರಾಜ ಗವಾಯಿಗಳ ಆಶ್ರಮ, ಸಾಯಿಬಾಬಾ ದೇವಸ್ಥಾನ, ರಾಚೋಟೇಶ್ವರ ದೇವಸ್ಥಾನ, ಜೋಡು ಮಾರುತಿ ದೇವಸ್ಥಾನಗಳಲ್ಲಿ ಜನರು ತಮ್ಮ ವಾಹನಗಳಿಗೆ ವಿಶೇಷ ಪೂಜೆ ನೆರವೇರಿಸಿದರು.
ನರಕ ಚತುರ್ದಶಿಯಿಂದ ಬಲಿಪಾಡ್ಯಮಿವರೆಗೆ ಜಿಲ್ಲೆಯಲ್ಲಿ ದೀಪಾವಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಆಕಾಶ ಬುಟ್ಟಿಗಳು, ಸಾಲು ಸಾಲು ಹಣತೆಗಳು, ವರ್ಣಮಯವಾದ ವಿದ್ಯುದ್ದೀಪಗಳ ಸರಗಳು ಮನೆ, ದೇವಸ್ಥಾನ, ಅಂಗಡಿ, ವ್ಯಾಪಾರ, ವಾಣಿಜ್ಯ ಕೇಂದ್ರಗಳಲ್ಲಿ ಬೆಳಗಲಾರಂಭಿಸಿವೆ. ರಾತ್ರಿಯಿಡೀ ಸಾಲು ಸಾಲು ಹಣತೆಗಳು, ಬಾಗಿಲುಗಳ ಮುಂದೆ ತೂಗಾಡುವ ಬಣ್ಣ ಬಣ್ಣದ ಆಕಾಶಬುಟ್ಟಿಗಳು ಕಾಣಿಸುತ್ತಿವೆ.
ಜಿಲ್ಲೆಯಲ್ಲಿ ಪ್ರತಿ ಮನೆಯಲ್ಲಿ ರಾತ್ರಿ 8ಕ್ಕೆ ಮುತ್ತೈದೆಯರು ತಾಯಿ ಲಕ್ಷ್ಮೀದೇವಿ ಪೂಜೆ ನೆರವೇರಿಸಿದರು. ಮನೆ ದೇವರ ಕೋಣೆಯಲ್ಲಿ ಕಳಶ ಹಾಗೂ ಮಡಿ ನೀರು ತುಂಬಿದ್ದ ಕಂಚಿನ ತಂಬಿಗೆಯಲ್ಲಿ ತೆಂಗಿನ ಕಾಯಿಗೆ ಸೀರೆ ಉಡಿಸಿ, ವಿವಿಧ ಹೂವುಗಳಿಂದ ಲಕ್ಷ್ಮೀದೇವಿಯನ್ನು ಅಲಂಕರಿಸಿ ಭಕ್ತಿಯಿಂದ ಪೂಜಿಸಿದರು.
ದೀಪಾವಳಿ ಹಬ್ಬದ ಅಂಗವಾಗಿ ಕೆಲ ವರ್ತಕರು, ವಾಣಿಜ್ಯ ಸಂಸ್ಥೆಗಳು ಲಕ್ಷ್ಮೀಪೂಜೆ ನಿಮಿತ್ತ ಅಂಗಡಿ, ಮಳಿಗೆಗಳ ಮುಂದೆ ಶಾಮಿಯಾನ ಹಾಕಿ ಅಲಂಕರಿಸಿದ್ದರು. ವರ್ತಕರು ಈ ದಿನ ಹೊಸ ಖಾತೆ ಕಿರ್ದಿ ಪುಸ್ತಕ ಖರೀದಿಸಿ ಪೂಜೆ ಮಾಡಿದರು.
ಅವಳಿ ನಗರ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಶನಿವಾರ ಬಲಿಪಾಡ್ಯ ಆಚರಣೆ ಮಾಡಲಾಗುತ್ತದೆ. ಬಲಿಪಾಡ್ಯಮಿ ದಿನ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಹಟ್ಟಿ ಲಕ್ಕವ್ವಳ ಪೂಜೆ ನೆರವೇರಿಸುತ್ತಾರೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮನೆ-ಅಂಗಡಿಯಲ್ಲಿ ಪ್ರತಿಷ್ಠಾಪಿಸಿರುವ ಲಕ್ಷ್ಮೀ ಪೂಜೆ ಮಾಡಿ ಸಂಭ್ರಮಿಸಿದರೆ ಗ್ರಾಮೀಣ ಪ್ರದೇಶದಲ್ಲೂ ಹೆಚ್ಚಾಗಿ ಹಟ್ಟಿ ಲಕ್ಕವ್ವಳ ಹಾಗೂ ಸಗಣಿಯಿಂದ ತಯಾರಿಸಿದ ಪಾಂಡವರ ಮೂರ್ತಿ ಇಟ್ಟು ಮನೆಯಲ್ಲಿ ಪೂಜಿಸುವ ಸಂಪ್ರದಾಯ ಇದೆ.
ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ
ಹಬ್ಬಕ್ಕೂ ಮುನ್ನವೇ ಸಾಧಾರಣ ದರದಲ್ಲಿ ಮಾರಾಟವಾಗಿದ್ದ ಸೇವಂತಿಗೆ, ಚೆಂಡು ಹೂ ಸೇರಿದಂತೆ ಇನ್ನಿತರೆ ಹೂವಿನ ಬೆಲೆ ಗಗನಕ್ಕೇರಿತ್ತು. ಬೆಳಗ್ಗೆಯಿಂದಲೇ ನಗರದ ಮಾರುಕಟ್ಟೆ, ಬೆಟಗೇರಿಯ ಮಾರುಕಟ್ಟೆ ಹಾಗೂ ಹಾತಲಗೇರಿ ನಾಕಾ ಸೇರಿದಂತೆ ಇನ್ನಿತರ ಪ್ರದೇಶದಲ್ಲಿ ಹೂವು ಮಾರಾಟ ಜೋರಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಹಾಕಲಾಗಿದೆ.