ವಕ್ಫ್ ತಿದ್ದುಪಡಿಗೆ ಒಮ್ಮತದ ನಿರ್ಣಯವಾಗಲಿ : ಎಸ್.ವಿ. ಸಂಕನೂರ

0
Protest by BJP
Spread the love

ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯ ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಕಾಂಗ್ರೆಸ್ ಸರಕಾರದ ಕುಮ್ಮಕ್ಕಿನಿಂದ ವಕ್ಫ್ ಮಂಡಳಿಯು ಸಾರ್ವಜನಿಕರ ಆಸ್ತಿ ಕಬಳಿಕೆಗೆ ಮುಂದಾಗಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಸೋಮವಾರ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದರು.

Advertisement

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಅಲ್ಲಿಂದ ತಹಸೀಲ್ದಾರ್ ಕಚೇರಿಯವರೆಗೆ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಕಾರ್ಯಕರ್ತರು ಕಚೇರಿ ಒಳಗೆ ಪ್ರವೇಶಿಸದಂತೆ ತಡೆದರು. ಈ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಎಚ್.ಕೆ. ಪಾಟೀಲ ವಿರುದ್ಧ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿ, ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ಮುಂದಾಳತ್ವ ವಹಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಕೇಂದ್ರ ಸರಕಾರ ವಕ್ಫ್ ಕಾಯಿದೆಗೆ ತಿದ್ದುಪಡಿ ಮಂಡಿಸಿದ ತಕ್ಷಣ ರಾಜ್ಯದಲ್ಲಿ ವಕ್ಫ್ ಮಂಡಳಿಯಿಂದ ದೇಶಾದ್ಯಂತ ಸಾರ್ವಜನಿಕರ ಆಸ್ತಿ ಕಬಳಿಕೆಯಾಗುತ್ತಿದೆ. ಬೆಂಗಳೂರಿನ ವಿಧಾನಸೌಧ, ಪುರಾತನ ದೇವಸ್ಥಾನ, ಮುಗ್ಧ ರೈತರ ಜಮೀನುಗಳು ಸೇರಿದಂತೆ ಹಿಂದೂಗಳಿಗೆ ಸೇರಿದ ಆಸ್ತಿ ಉತಾರದಲ್ಲಿ ವಕ್ಫ್ ಹೆಸರು ನಮೂದಿಸಿ, ಅವುಗಳನ್ನು ಕಬಳಿಸುವ ಸಂಚು ನಡೆದಿದೆ ಎಂದು ಆರೋಪಿಸಿದರು.

ವಕ್ಫ್ ಬೋರ್ಡಿನಿಂದ ಆಗಿರುವ ಅವಾಂತರಗಳಿಂದ ರಾಜ್ಯದಲ್ಲಿ ಶಾಂತಿ-ಸಾಮರಸ್ಯ ಕೆಡುತ್ತಿದೆ. ಎರಡು ಕೋಮುಗಳ ಮಧ್ಯೆ ಸಂಘರ್ಷ ಆರಂಭವಾಗಿದೆ. ರೈತರು ಮತ್ತು ಹಿಂದೂಗಳ ಹಿತರಕ್ಷಣೆಗೆ ಮುಂದಾಗಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಸಮುದಾಯದ ಓಲೈಕೆಯಲ್ಲಿ ತಲ್ಲೀನರಾಗಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಂ.ಎಸ್. ಕರಿಗೌಡ್ರ, ವಿಜಯಕುಮಾರ ಗಡ್ಡಿ, ನಾಗರಾಜ ಕುಲಕರ್ಣಿ, ಸಿದ್ದು ಪಲ್ಲೇದ, ಸುಧೀರ ಕಾಟಿಗಾರ, ಅನಿಲ ಅಬ್ಬಿಗೇರಿ, ಮಹೇಶ ದಾಸರ, ರಾಘವೇಂದ್ರ ಯಳವತ್ತಿ, ವಿನಾಯಕ ಮಾನ್ವಿ, ಉಷಾ ದಾಸರ, ಚಂದ್ರು ತಡಸದ ಮುಂತಾದವರು ಉಪಸ್ಥಿತರಿದ್ದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಸಚಿವ ಜಮೀರ್ ಅಹ್ಮದ್ ಖಾನ್ ಅವರೇ ವಕ್ಫ್ ಗೊಂದಲ ಸೃಷ್ಟಿಗೆ ಕಾರಣರಾಗಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ತಂದು ಸಾರ್ವಜನಿಕರ ಆಸ್ತಿಯನ್ನು ಕಬಳಿಸುವ ಕೆಲಸ ಮಾಡುತ್ತಿರುವುದು ಖಂಡನೀಯ. ಕೂಡಲೇ ಸಚಿವ ಜಮೀರ್ ಅಹ್ಮದ್ ಖಾನ್‌ರನ್ನು ಸಚಿವ ಸಂಪುಟದಿಂದ ಉಚ್ಛಾಟಿಸಬೇಕು. ವಕ್ಫ್ ಆಸ್ತಿ ವಿಷಯವಾಗಿ ಉಂಟಾಗಿರುವ ಗೊಂದಲದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಯಾಚಿಸಬೇಕು. ವಕ್ಫ್ ಅದಾಲತ್ ನಡೆಸದಂತೆ ಆದೇಶ ಹೊರಡಿಸಬೇಕು. ಅಲ್ಲದೆ, ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಕಾಯಿದೆಗೆ ಒಮ್ಮತದ ನಿರ್ಣಯ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು.


Spread the love

LEAVE A REPLY

Please enter your comment!
Please enter your name here