ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಏಳು ಜನ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರದ ಬಳಿಕ ಶಾಸಕ ಮುನಿರತ್ನ ಅವರು ಕಡೆಗೂ ಮೌನ ಮುರಿದಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಣೆ ಬರಹದಲ್ಲಿ ಬರೆದಿದ್ದರೆ ಸಚಿವನಾಗುವುದನ್ನ ತಪ್ಪಿಸಲು ಆಗುವುದಿಲ್ಲ ಎಂದಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಅವರು ಮಂತ್ರಿಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ನಾನು ಪಕ್ಷದ ಕಾರ್ಯಕರ್ತನಾಗಿದ್ದೇನೆ. ಮೂರು ಬಾರಿ ಶಾಸಕನಾಗಿರುವುದು ದೈವ ಕೃಪೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಪಕ್ಷ, ವರಿಷ್ಠರು, ಮುಖ್ಯಮಂತ್ರಿಗಳ ಬಗ್ಗೆ ತಪ್ಪಾಗಿ ಮಾತನಾಡುವುದಿಲ್ಲ. ಹಾಗೆ ಯಾರು ಮಾತನಾಡಬಾರದು ಎಂದರು.
ಅವರೆಲ್ಲಾ ಬಹಳಷ್ಟು ಜನ ಬ್ಯೂಸಿ ಇದ್ದಾರೆ. ಎಲ್ಲಾ ಸಚಿವರು ಬ್ಯೂಸಿ ಇದ್ದಾರೆ. ಒಬ್ಬರು ದಾವಣಗೆರೆ ಅಂತಾರೆ, ಇನ್ನೊಬ್ಬರು ಮತ್ತೊಂದು ಅಂತಾರೆ. ಅವರನ್ನ ನೋಡಿದರೆ ಬಿಜೆಪಿ ಪಕ್ಷಕ್ಕೆ ಪ್ರಮಾಣಿಕವಾಗಿ ಮತ್ತು ದಿನದ ಇಪ್ಪತ್ನಾಲ್ಕು ತಾಸು ಕೆಲಸ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ
ಮಿತ್ರ ಮಂಡಳಿಯ ಸದಸ್ಯ ಹಾಗೂ ಸಚಿವ ಬೈರತಿ ಬಸವರಾಜ್ ವಿರುದ್ಧ ಕಿಡಿಕಾರಿದರು.
ಯತ್ನಾಳ್ ಅವರ ಸಿಡಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಬಳಿ ಸಿಡಿ ಇದೆಯಾ, ಇದ್ರೆ ತೋರಿಸಿ. ಸುಮ್ಮನೆ ಗೊಂದಲ ಸೃಷ್ಟಿಸುವ ಅನಗತ್ಯ ಹೇಳಿಕೆ ನೀಡಬಾರದು. ರಾಜ್ಯದ ಮುಖ್ಯಮಂತ್ರಿಯವರ ಬಗ್ಗೆ ಆಧಾರ ರಹಿತ ಆರೋಪ ಮಾಡಬಾರದು ಎಂದು ಶಾಸಕ ಮುನಿರತ್ನ ಹೇಳಿದರು.