ಬೆಂಗಳೂರು: ಶೀಲ ಶಂಕಿಸಿ ಪತ್ನಿಯನ್ನು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಭೀಮಾನಗರ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ. ಚೆಲ್ಲಘಟ್ಟದ ನಿವಾಸಿ ಸಂಗೀತಾ (30) ಕೊಲೆಯಾದ ದುರ್ಧಯವಿಯಾಗಿದ್ದು, ಕೃತ್ಯದ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಆಕೆಯ ಪತಿ ನಾಗರಾಜನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ಸಂಗೀತಾಗೆ 6 ವರ್ಷಗಳ ಹಿಂದೆ ನಾಗರಾಜನೊಂದಿಗೆ ಮದುವೆಯಾಗಿದ್ದು, ದಂಪತಿಗೆ 4 ವರ್ಷದ ಮಗು ಇದೆ. ದಂಪತಿ ತಡರಾತ್ರಿ ಕುಳ್ಳಪ್ಪ ಗಾರ್ಡನ್ನಲ್ಲಿರುವ ಸಂಬಂಧಿ ಮನೆಗೆ ಬಂದಿದ್ದು, ಈ ವೇಳೆ ಮದ್ಯದ ಅಮಲಿನಲ್ಲಿದ್ದ ಆರೋಪಿ ನಾಗರಾಜ್ ಪತ್ನಿಯೊಂದಿಗೆ ಜಗಳವಾಡಿದ್ದಾನೆ.
ಬಳಿಕ ಆಕೆಯನ್ನು ಕೆಳಗೆ ತಳ್ಳಿ ಕತ್ತು ಕೊಯ್ದು ಕೊಲೆಗೈದಿದ್ದಾನೆ. ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಿಕಿತ್ಸೆ ಬಳಿಕ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಜೀವನ್ ಭೀಮಾ ನಗರ ಠಾಣೆ ಪೊಲೀಸರು ಹೇಳಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.