ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ 2021 ಸರಳತೆಗೆ ಸಜ್ಜು
-ಪ್ರತಿ ವರ್ಷ ಗವಿಸಿದ್ಧನ ಬಳಿ ಭಕ್ತರು, ಈ ವರ್ಷ ಭಕ್ತರ ಬಳಿಯೇ ಗವಿಸಿದ್ಧೇಶ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಶತಮಾನಗಳಿಂದ ನಡೆದುಕೊಂಡು ಬಂದ ಶ್ರೀ ಗವಿಸಿದ್ಧೇಶ್ವರ ಜಾತ್ರೆಯನ್ನು ಕೋವಿಡ್-19 ಇರುವದರಿಂದ ಸರ್ಕಾರದ ಆದೇಶ ಮೀರದಂತೆ, ಸಂಪ್ರದಾಯ ಮುರಿಯದಂತೆ ಸರಳವಾಗಿ ಆಚರಿಸಲು ನಿಶ್ಚಯಿಸಿ ಶ್ರೀಮಠದ ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸಿ, ಉಳಿದ ಕಾರ್ಯಕ್ರಮಗಳನ್ನು ಮಾಡದಿರಲು ನಿಶ್ಚಯಿಸಲಾಗಿದೆ.
ಶ್ರೀ ಗವಿವಠದ ಸದ್ಭಕ್ತರು, ಜಿಲ್ಲಾಡಳಿತ ಜನಪ್ರತಿನಿಧಿಗಳು ಚರ್ಚಿಸಿ ಈ ಕೆಳಗಿನ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
- ಪ್ರತಿ ವರ್ಷ ಜಾತ್ರೆಯ ಅಂಗವಾಗಿ ಸಾಮಾಜಿಕ ಕಳಕಳಿಯಡಿ ನಡೆಯುವ ವಿದ್ಯಾರ್ಥಿ ಜಾಥಾ ಇರುವುದಿಲ್ಲ
- ಗುಡ್ಡದಲ್ಲಿ ಹಾಗೂ ಕೆರೆಯ ದಡದಲ್ಲಿ ಬಹಳ ಜನ ಒಂದೆ ಕಡೆ ಸೇರುವುದರಿಂದ ತೆಪ್ಪೋತ್ಸವ ಕಾರ್ಯಕ್ರಮವೂ ಸಹ ಇರುವುದಿಲ್ಲ.
- ದಿನಾಂಕ 30 ಶನಿವಾರ ಜರುಗುವ ಮಹಾರಥೋತ್ಸವ ಪ್ರತಿ ವರ್ಷದಂತೆ ಲಕ್ಷಾಂತರ ಭಕ್ತ ಜನರ ಮಧ್ಯದಲ್ಲಿ ಜರುಗುವದಿಲ್ಲ. ಜಾತ್ರಾ ಮೈದಾನದಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ, ಪುರಿ ಜಗನ್ನಾಥ ರಥೋತ್ಸವ, ಮೈಸೂರ ದಸರಾ ಜಂಬೂಸವಾರಿ ರೀತಿಯಲ್ಲಿ ಕೇವಲ ಸಾಂಪ್ರದಾಯಿಕವಾಗಿ ರಥೋತ್ಸವವನ್ನು ಸರಳವಾಗಿ ಆಚರಿಸಲಾಗುವುದು.
- ಕೈಲಾಸ ಮಂಟಪದ ವೇದಿಕೆಯಲ್ಲಿ ಜರುಗುವ ಧಾರ್ಮಿಕ ಗೋಷ್ಠಿ, ಭಕ್ತ ಹಿತ ಚಿಂತನಾ ಸಭೆ, ಅನುಭಾವಿಗಳ ಅಮೃತಗೋಷ್ಠಿ, ಸಂಗೀತ, ಸಾಹಿತ್ಯ, ಹಾಸ್ಯ, ಸಾಧಕರ ಸನ್ಮಾನ ಈ ಯಾವ ಕಾರ್ಯಕ್ರಮಗಳೂ ನಡೆಯುವುದಿಲ್ಲ.
- ದಿನಾಂಕ 31 ರವಿವಾರದಂದು ಶರಣರ ದೀರ್ಘದಂಡ ನಮಸ್ಕಾರ ಇರುತ್ತದೆ. ಆದರೆ ಭಕ್ತರಿಗೆ ದೀರ್ಘದಂಡ ನಮಸ್ಕಾರ ಹಾಕಲು ಅನುಮತಿ ಇರುವುದಿಲ್ಲ. ಅವರ ಹಿಂದೆ ದೀರ್ಘದಂಡ ನಮಸ್ಕಾರ ಹಾಕದಂತೆ ಭಕ್ತರಲ್ಲಿ ಕೇಳಿಕೊಳ್ಳುತ್ತೇವೆ. ಶರಣರು ಧೀರ್ಘದಂಡ ನಮಸ್ಕಾರ ಹಾಕುವ ದಿನ ಹೊರತು ಪಡಿಸಿ ತಮಗೆ ಅನುಕೂಲವಾದ ಸಮಯ ಅಥವಾ ದಿನದಂದು ತಮ್ಮ ಹರಕೆ ಅಥವಾ ಸಂಕಲ್ಪಗಳನ್ನು ಪೂರೈಸಿಸಬಹುದು.
- ದಿನಾಂಕ 31 ರಂದು ಸಿದ್ಧೇಶ್ವರ ಮೂರ್ತಿಯ ಮೆರವಣಿಗೆ ನಂತರ ನಡೆಯುವ ಮದ್ದು ಸುಡುವ ಕಾರ್ಯಕ್ರಮ ನಡೆಯುವುದಿಲ್ಲ.
- ಪ್ರತಿ ವರ್ಷದಂತೆ 15-20 ದಿವಸ ನಡೆಯುವ ಮಹಾದಾಸೋಹ ಶ್ರೀಮಠಕ್ಕೆ ಬರುವ ಭಕ್ತಾಧಿಗಳಿಗೆ ಅನಾನುಕೂಲವಾಗದಿರಲೆಂದು ಈ ವರ್ಷ ಕೇವಲ ಜನೇವರಿ 30, 31 ಮತ್ತು ಫೆಬ್ರುವರಿ 1ರವರೆಗೆ ಸೀಮಿತಗೊಳಿಸಲಾಗಿದೆ. ಭಕ್ತರು ಯಾರು ರೊಟ್ಟಿಗಳನ್ನು ಹಾಗೂ ಸಿಹಿ ಪದಾರ್ಥಗಳನ್ನು ತರಬಾರದು, ಅವುಗಳನ್ನು ಮಹಾದಾಸೋಹದಲ್ಲಿ ಸ್ವೀಕರಿಸುವುದಿಲ್ಲ.
- ದಾಸೋಹದಲ್ಲಿ ಕೇವಲ ದವಸ-ಧಾನ್ಯ, ಕಾಯಿಪಲ್ಲೆಯನ್ನು ಮಾತ್ರ ಸ್ವೀಕರಿಸಲಾಗುವುದು.
- ಜಾತ್ರಾ ಮಹೋತ್ಸವದಲ್ಲಿ ಅಂಗಡಿಗಳನ್ನು, ಅಮ್ಯುಜ್ಮೆಂಟ್ ಪಾರ್ಕ, ಮಿಠಾಯಿ, ಹೋಟಲ್, ಸ್ಟೇಷನರಿ ಅಂಗಡಿಗಳನ್ನಗೊಂಡಂತೆ ಸಂಪೂರ್ಣವಾಗಿ ಆವರಣದಲ್ಲಿ ಜಾತ್ರಾ ಅಂಗಡಿಗಳು ಇರುವುದಿಲ್ಲ.
- ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದ ಆವರಣದಲ್ಲಿ ಪಾನಿಪುರಿ, ಗೋಬಿ, ಕಡ್ಲೆ, ಕಬ್ಬಿನಹಾಲು ಐಸ್ಕ್ರೀಮ್, ಇತರೆ ತಿನಿಸಿನ ಮಾರಾಟದ ಅಂಗಡಿಗಳನ್ನು ನಿಷೇಧಿಸಿದೆ.
- ಕೃಷಿ ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಕ್ರೀಡಾಕೂಟ, ನಾಟಕ, ವಿವಿಧ ಸಾಂಸ್ಕೃತಿಕ, ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಿದೆ.
- ಪ್ರತಿ ವರ್ಷದಂತೆ ಶ್ರೀ ಗವಿಸಿದ್ಧೇಶ್ವರ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ರೆಡ್ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಜರುಗುವ ರಕ್ತದಾನ ಶಿಬಿರವನ್ನು ನಡೆಸಲಾಗುತ್ತದೆ.
- ಪ್ರತಿ ವರ್ಷ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತಿತ್ತು ಆದರೆ ಈ ವರ್ಷ ರಥೋತ್ಸವಕ್ಕೆ ಬರುವ ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದಿಲ್ಲ.
- ಶ್ರೀ ಗವಿಸಿದ್ಧೇಶ್ವರ ಗದ್ದುಗೆ ದರ್ಶನಕ್ಕೆ ಅವಕಾಶವಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಭಕ್ತರು ದರ್ಶನ ಪಡೆಯಬಹುದು. ಆದರೆ ಎಲ್ಲಿ ಗುಂಪುಗೂಡಿ ಕೂಡುವಂತಿಲ್ಲ. ಶ್ರೀಮಠದ ಸಮಸ್ತ ಸದ್ಭಕ್ತರಲ್ಲಿ ಅರಿಕೆ ಮಾಡಿಕೊಳ್ಳುವದೇನೆಂದರೆ ಶ್ರೀಮಠ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಭಕ್ತರು ಸೇರಿ ತೆಗೆದುಕೊಂಡ ನಿರ್ಣಯವನ್ನು ಪ್ರೀತಿಯಿಂದ ಒಪ್ಪಿಕೊಂಡು ಈ ವರ್ಷ ಸರಕಾರದ ಆದೇಶ ಪಾಲಿಸುತ್ತ ಗವಿಸಿದ್ಧೇಶನ ಜಾತ್ರೆಯನ್ನು ಸರಳವಾಗಿ ಆಚರಿಸೋಣ ತಮಗೆಲ್ಲಾ ಗವಿಸಿದ್ಧೇಶನ ಕೃಪೆ ಸದಾ ಇರಲೆಂದು ಪ್ರಾರ್ಥಿಸುತ್ತೇವೆ ಎಂದು ಗವಿಮಠದ ಪ್ರಕಟಣೆ ತಿಳಿಸಿದೆ.
ಶ್ರೀ ಗವಿಸಿದ್ಧೇಶ್ವರ ಮಹಾ ರಥೋತ್ಸವದ ದೃಶ್ಯವನ್ನು ಸಾಮಾಜಿಕ, ಜಾಲತಾಣದಲ್ಲಿ ಹಾಗೂ ಸ್ಥಳೀಯ ಚಾನಲ್ಗಳಲ್ಲಿ ಪ್ರಸಾರ ಮಾಡಲಾಗುವದು.
ಭಕ್ತರು ಶ್ರೀಮಠದ ಆವರಣಕ್ಕೆ ಬರದೆ ತಾವಿರುವ ಸ್ಥಳದಲ್ಲಿಯೇ ರಥ ದರ್ಶನ ಮಾಡಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೆವೆ ಎಂದು ಗವಿಮಠದ ಪ್ರಕಟಣೆ ತಿಳಿಸಿದೆ.
ನಾಡಿನ ಭಕ್ತಗಣಕ್ಕೆ ಶ್ರೀ ಗವಿಸಿದ್ಧೇಶನ ಜಾತ್ರೆಯ ಬಗ್ಗೆ ಅತ್ಯಂತ ಕುತೂಹಲ. ಜಾತ್ರೆ ಹೇಗೆ ನಡೆಯುತ್ತದೆ? ಅಜ್ಜನವರ ನಿರ್ಣಯವೇನು? ಜಾತ್ರೆ ನಡೆಯುವುದೋ ಇಲ್ಲವೋ? ಹೀಗೆ ಹತ್ತು ಹಲವು ಸಂಗತಿಗಳು. ಜಾತ್ರೆ ನಡೆಸುತ್ತೇನೆ ಎನ್ನಲು, ಜಾತ್ರೆ ನಡೆಸುವುದಿಲ್ಲವೆನ್ನಲು ನಾನಾರು? ಒಂದೆಡೆ ದೈವಿಶಕ್ತಿ ಇನ್ನೊಂದೆಡೆ ಭಕ್ತರ ಭಕ್ತಿಯ ಶಕ್ತಿ. ಈ ಎರಡೂ ದಿವ್ಯ ಶಕ್ತಿಯ ಸಂಗಮವನ್ನು ನಾನು ಕೂಡಿಸುವೆನೆಂದಾಗಲಿ ಅಥವಾ ನಿಲ್ಲಿಸುವೆನೆಂದಾಗಲಿ ಹೇಳಿದರೆ ಅಹಂಕಾರದ ಮಾತಾದೀತು. ಬಸವಣ್ಣನವರು ಹೇಳುವಂತೆ “ಆನು ದೇವಾ ಹೊರಗಣವನು ಕೂಡಲ ಸಂಗಮದೇವಾ, ನಿಮ್ಮ ನಾಮವಿಡಿದ ಅನಾಮಿಕ ನಾನು”
ಇಂದು ದೈವೇಚ್ಛೆ, ಭಕ್ತರ ನಿರೀಕ್ಷೆ ಇವರೆಡರ ಪರೀಕ್ಷೆಯ ಸಂಧಿಕಾಲ. ಜಾತ್ರೆಯನ್ನೂ ನಡೆಸಬೇಕು, ಸರ್ಕಾರದ ಆದೇಶವನ್ನೂ ಪಾಲಿಸಬೇಕು. ಕಾನೂನನ್ನು ಮೀರಿರಬಾರದು, ಸಂಪ್ರದಾಯವನ್ನು ಮುರಿದಿರಬಾರದು. ಪರಿಸರ ಸ್ನೇಹಿ ಜಾತ್ರೆಯ ಜೊತೆಗೆ, ಪರಿಸ್ಥಿತಿ ಸ್ನೇಹಿ ಜಾತ್ರೆಯನ್ನು ಮಾಡುವ ಮಧ್ಯಮ ಮಾರ್ಗವನ್ನು ಅನುಸರಿಸಬೇಕಾಗಿದೆ. ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ತೆಗೆದುಕೊಳ್ಳುವ ನಿರ್ಧಾರಗಳು, ನಮ್ಮ ಒಳಿತಿಗಾಗಿ ಎನ್ನುವ ಉನ್ನತ ಭಾವದೊಂದಿಗೆ ಈ ವರ್ಷದ ಜಾತ್ರೆ ಸರಳ ಮತ್ತು ವೈಶಿಷ್ಟ್ಯಪೂರ್ಣವಾಗಿ ಧಾರ್ಮಿಕ ವಿಧಿವಿಧಾನಗಳಿಗೆ ಮಾತ್ರ ಸೀಮಿತಗೊಳಿಸೋಣ.
ಇಷ್ಟು ವರ್ಷ ಮಠದ ಅಂಗಳದಲ್ಲಿ ಗವಿಸಿದ್ಧೇಶ್ವರನ ರಥ ಎಳೆಯುತ್ತಿತ್ತು . ಭಕ್ತರು ಅದನ್ನು ನೋಡಲು ಬರುತ್ತಿದ್ದರು. ಈ ವರ್ಷ ನಿಮ್ಮ ಹೃದಯಂಗಳದಲ್ಲಿ ಆತನ ದಿವ್ಯ ಸ್ಮರಣೆಯ ರಥ ಎಳೆಯಲಿ ಅದನ್ನು ನೋಡಲು ಗವಿಸಿದ್ಧೇಶ್ವರನೇ ನಿಮ್ಮ ಮನೆಗೆ ಬರುತ್ತಾನೆಂದು ನನ್ನ ಭಾವನೆ.
-ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ, ಸಂಸ್ಥಾನ ಗವಿಮಠ, ಕೊಪ್ಪಳ.