ಲಕ್ಷ್ಮೇಶ್ವರ:- ಗದುಗಿನ ಲೊಬೋಸಾ ಫುಡ್ ಆಂಡ್ ಬೆವರೇಜ್ ವ್ಯವಸ್ಥಾಪಕ ಸಂದೀಪ ಕಬಾಡಿ ಇವರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಚಹಾ ಪುಡಿಗೆ ಅಕ್ರಮವಾಗಿ ಬಣ್ಣ ಸೇರಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಅಕ್ರಮ ಚಹಾ ಪುಡಿ ದಂಧೆಕೋರರ ಗೋದಾಮಿಗೆ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಸಿದ್ದ ಅಂದಾಜು ೧೫ ಲಕ್ಷ ರೂಪಾಯಿ ಮೌಲ್ಯದ ೧೦ ಟನ್ ಕಲಬೆರಕೆ ಚಹಾ ಪುಡಿ ಮತ್ತು ತಯಾರಕನನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಶನಿವಾರ ನಡೆದಿದೆ.
ಪ್ರಕರಣದ ವಿವರ:-
ಪಟ್ಟಣದ ದಯಾನಂದ ಟ್ರೇಡರ್ಸ್ ಹೆಸರಿನಲ್ಲಿ ಕಳೆದ ಅನೇಕ ವರ್ಷಗಳಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕಲಬೆರಕೆ ಟೀ ಪುಡಿ ಮಾರಾಟ ದಂಧೆ ನಡೆಯುತ್ತಿದೆ. ೧೨ರಿಂದ ೧೫ ಕೆಜಿ ಚಹಾ ಪುಡಿಗೆ ಅರ್ಧ ಕೆಜಿ ಸಿಂಥೆಟಿಕ್ ಕಲರ್ ಬಳಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಲಕ್ಷ್ಮೇಶ್ವರದ ದಯಾನಂದ ಟ್ರೇಡರ್ಸ್‌ನ ಮಲ್ಲಿಕಾರ್ಜುನ ಕಡಕೋಳ ಎನ್ನುವ ವ್ಯಕ್ತಿ ಅನಧಿಕೃತವಾಗಿ ಚಹಾ ಪುಡಿಗೆ ಬಣ್ಣ ಬೆರೆಸಿ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಲೋಬೋಸಾ ಕಂಪನಿಯ ಉತ್ಪಾದನೆಯ ನಕಲು ಮಾಡಿ ಮೋಸ, ವಂಚನೆ ಮಾಡಿ ಕಂಪನಿಯ ಹೆಸರನ್ನು ಹಾಳು ಮಾಡುತ್ತಿದ್ದಾರೆ ಹಾಗೂ ವ್ಯಾಪಾರದಲ್ಲಿ ನಷ್ಟ ಮಾಡಿದ್ದಾರೆ ಎಂದು ಆರೋಪಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.
ಲೋಬೋಸಾ ಕಂಪನಿಯ ವ್ಯವಸ್ಥಾಪಕ ಸಂದೀಪ ಕಬಾಡಿ ಮತ್ತು ಕಂಪನಿಯ ಮುಖ್ಯಸ್ಥ ಲೋಬಾಸಾ ಕಬಾಡಿ ಮಾಹಿತಿ ನೀಡಿ, ಲೊಬೋಸಾ ಚಹಾ ಪುಡಿಯಲ್ಲಿ ಸಕ್ಕರೆ, ಏಲಕ್ಕಿ, ಶುಂಠಿ, ಫುಡ್ ಕಲರ್ ಮಿಕ್ಸ್ ಮಾಡುವ ಪರವಾನಿಗೆ, ಪೇಟೆಂಟ್ ನಮ್ಮ ಕಂಪನಿ ಮಾತ್ರ ಪಡೆದುಕೊಂಡಿದೆ. ಬೇರಾರೂ ನಮ್ಮ ಉತ್ಪನ್ನಗಳ ನಕಲು ಮಾಡದಂತೆ ಎಫ್‌ಎಸ್‌ಎಸ್‌ಎಐ ದೆಹಲಿಯಿಂದ ಅಧಿಕೃತ ಅನುಮತಿ ಪಡೆಯಲಾಗಿದೆ.
ಚಹಾ ಪುಡಿಯಲ್ಲಿ ಯಾರಾದರೂ ಬಣ್ಣ ಮಿಶ್ರಣ ಮಾಡಿದರೆ ಅವರ ಮೇಲೆ ಕಾಪಿರೈಟ್ ಉಲ್ಲಂಘನೆ ದೂರು ನೀಡುವದಾಗಿ ಹೇಳಿದರಲ್ಲದೆ, ಜಿಲ್ಲೆಯಲ್ಲಿ ಅನೇಕ ಕಡೆಗಳಲ್ಲಿ ಅಕ್ರಮವಾಗಿ ಚಹಾ ಪುಡಿಯಲ್ಲಿ ಮಿಶ್ರಣ ಮಾಡುವದು ನಡೆದಿದ್ದು, ಅಧಿಕಾರಿಗಳು ಈ ಕುರಿತಂತೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಬೇಕು ಎಂದರು.
ದೂರಿನ ಹಿನ್ನೆಲೆಯಲ್ಲಿ ಪಟ್ಟಣದ ಶಿಗ್ಲಿ ರಸ್ತೆಯ ಗೋಡೌನ್‌ಗೆ ಕ್ರೈಂ ವಿಭಾಗದ ಪಿಎಸ್‌ಐ ಟಿ.ಕೆ. ರಾಠೋಡ ಹಾಗೂ ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಅಧಿಕಾರಿ ರಾಜೇಂದ್ರ ಗಡಾದ ಜಂಟಿ ಕಾರ್ಯಾಚರಣೆಯಲ್ಲಿ ದಾಳಿ ಮಾಡಿದಾಗ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು ೩೦೦ ಚಹಾ ಪುಡಿ ಪ್ಯಾಕೇಟ್‌ಗಳು, ಅಂದಾಜು ೧೫ ಲಕ್ಷ ರೂಪಾಯಿ ಮೌಲ್ಯದ ಸುಮಾರು ೧೦ ಟನ್ ಚಹಾ ಪುಡಿ ವಶಪಡಿಸಿಕೊಂಡಿದ್ದಾರೆ.


