ಹಾವೇರಿ:-ಬೆಳ್ಳಿಗ್ಗೆ ತಾನೇ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಪಠಾಣ್ ಮೇಲೆ ರೌಡಿಶೀಟ್ ಇದೆ ಎಂದು ಹೇಳಿದ್ದ ಹಾವೇರಿ ಎಸ್ಪಿ ಅಂಶುಕುಮಾರ್ ಇದೀಗ ಉಲ್ಟಾ ಹೊಡೆದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಮೇಲೆ ರೌಡಿಶೀಟರ್ ಪ್ರಕರಣ ಇದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ಆರೋಪ ಮಾಡಿದ್ದರು.
ಇದೇ ವಿಚಾರವಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಎಸ್ಪಿ, ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಪಠಾಣ್ ಮೇಲೆ ರೌಡಿಶೀಟ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಯಾಸೀರ್ ಪಠಾಣ್ ಅವರ ಮೇಲೆ ರೌಡಿಶೀಟ್ ಇದೆ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಸಂಬಂಧ ಶಿಗ್ಗಾಂವಿ ಡಿಎಸ್ಪಿ ಹಾಗೂ ಪಿಎಸ್ಐ ಕಚೇರಿಯಿಂದ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದ್ದು, ಯಾಸೀರ್ ಪಠಾಣ್ ಅವರ ಮೇಲೆ ಯಾವುದೇ ರೀತಿಯ ರೌಡಿಶೀಟ್ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಘಟನೆ ಹಿನ್ನೆಲೆ:
ಕೆಲ ದಿನಗಳ ಹಿಂದೆ ಕಾಂಗ್ರೆಸ್ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ತಮಗೆ ಬೈ ಎಲೆಕ್ಷನ್ ಟಿಕೆಟ್ ಕೈತಪ್ಪಿದ ಬಳಿಕ ಪಠಾಣ್ ಓರ್ವ ರೌಡಿಶೀಟರ್ ಎಂದು ಆರೋಪಿಸಿದ್ದರು. ಇದನ್ನೇ ಇಟ್ಟುಕೊಂಡು ಇದೀಗ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಪಠಾಣ್ ಮೇಲೆ ರೌಡಿ ಶೀಟರ್ ಕೇಸ್ ಇದೆ, ವಿವಿಧ ಪ್ರಕರಣ ಇರೋದನ್ನು ಆಫಿಡಿವೇಟ್‌ನಲ್ಲಿ ಮುಚ್ಚಿಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ.