ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ದೇಶ ಮತ್ತು ಸಮಾಜಕ್ಕಾಗಿ ಸೇವೆ ಸಲ್ಲಿಸುವ ಅಮೂಲ್ಯ ಅವಕಾಶ ಸರ್ಕಾರಿ ನೌಕರರಿಗೆ ದೊರಕಿರುವುದರಿಂದ ಪ್ರತಿಯೊಬ್ಬ ಸರ್ಕಾರಿ ನೌಕರನೂ ಪ್ರಾಮಾಣಿಕವಾಗಿ ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕು. ಯಾವುದೇ ಆಸೆ-ಆಕಾಂಕ್ಷೆಗಳಿಗೂ ಬಲಿಯಾಗದೆ, ಪ್ರಾಮಾಣಿಕತೆ, ನೈತಿಕತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ತಹಸೀಲ್ದಾರ ವಾಸುದೇವ ಸ್ವಾಮಿ ಹೇಳಿದರು.
ಅವರು ಸೋಮವಾರ ಪಟ್ಟಣದ ಪುರಸಭೆ ಕಲಾ ಮಹಾವಿದ್ಯಾಲಯದಲ್ಲಿ ತಾಲೂಕಾಡಳಿತ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ `ಜಾಗೃತಿ ಅರಿವು ಸಪ್ತಾಹ-2024′ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಮಾತ್ರ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಸರ್ಕಾರದ ಸೌಲಭ್ಯಗಳು ಸಾರ್ವಜನಿಕರಿಗೆ ಅತೀ ಸುಲಭವಾಗಿ ದೊರಕುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಲಂಚ ಪಡೆಯುವುದು ಮತ್ತು ಲಂಚ ನೀಡುವುದು ಎರಡೂ ಅಪರಾಧವಾಗಿದೆ. ಹಾಗಾಗಿ ಸಾರ್ವಜನಿಕರಿಗೆ ಇದರ ಕುರಿತು ತಿಳಿಹೇಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಉಪನೋಂದಣಿ ಅಧಿಕಾರಿ ಎಸ್.ಕೆ. ಜಲರಡ್ಡಿ, ಎಸ್.ಕೆ. ವಾಲಿ, ಎಎಸ್‌ಐ ಎಂ.ಆರ್. ಮಟ್ಟಿ, ಹೆಸ್ಕಾಂನ ಆಂಜನಪ್ಪ ಸೇರಿ ಹಲವರಿದ್ದರು. ಪ್ರಾಚಾರ್ಯ ಬಿ.ಎಸ್. ಉಗ್ರದ ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರ ನಿರ್ಮೂಲನೆ ಕುರಿತ ಪ್ರತಿಜ್ಞಾವಿಧಿ ಬೋಧಿಸಿದರು.