ಬೆಂಗಳೂರು: ನಟ ಯಶ್ ಅಭಿನಯಿಸುತ್ತಿರುವ ಟಾಕ್ಸಿಕ್ ಚಿತ್ರಕ್ಕೆ ಕಾನೂನು ಸಂಕಷ್ಟ ಎದುರಾಗಿದೆ. ಟಾಕ್ಸಿಕ್ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ಶಾಕಿಂಗ್‌ಸಂಗತಿಯೊಂದು ಹೊರಬಿದ್ದಿದೆ. ಹೌದು ಇತ್ತೀಚೆಗೆ ‘ಟಾಕ್ಸಿಕ್’ ಸಿನಿಮಾ ತಂಡ, ಸೆಟ್ ನಿರ್ಮಾಣ ಮಾಡಲು ಮರಗಳನ್ನು ಕಡಿದು ನಾಶ ಮಾಡಿದೆ ಎಂಬ ಆರೋಪ ಕೇಳಿ ಬಂದಿತ್ತು.
ವಕೀಲರೊಬ್ಬರು ಮೊದಲಿಗೆ ಈ ಬಗ್ಗೆ ದೂರು ಸಲ್ಲಿಸಿದ್ದರು. ಇತ್ತೀಚೆಗೆ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರಲ್ಲದೆ, ಎಚ್ಎಂಟಿ ಕೆಲ ನಿಯಮಗಳನ್ನು ಮುರಿದಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಇದೀಗ ‘ಟಾಕ್ಸಿಕ್’ ಸಿನಿಮಾ ನಿರ್ಮಾಪಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮರಗಳನ್ನು ಕಡಿದ ಆರೋಪದಲ್ಲಿ ನ್ಯಾಯಾಲಯದ ಸೂಚನೆಯಂತೆ ‘ಟಾಕ್ಸಿಕ್’ ಸಿನಿಮಾದ ನಿರ್ಮಾಣ ಸಂಸ್ಥೆಗಳಾದ ಕೆವಿಎನ್ ಹಾಗೂ ಯಶ್ರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಹಾಗೂ ಹೆಚ್ಎಂಟಿ ಲಿಮಿಟೆಡ್ ವಿರುದ್ಧವೂ ಸಹ ಎಫ್ಐಆರ್ ದಾಖಲಾಗಿದೆ. ಅರಣ್ಯ ಕಾಯ್ದೆಯ ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳಿಗೆ ನೊಟೀಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.