ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲೆಯಲ್ಲಿರುವ ಆಸ್ತಿಗಳ ಉತಾರದಲ್ಲಿ 2019ರ ನಂತರ ಯಾವುದೇ ಆಸ್ತಿಗಳಲ್ಲಿ ವಕ್ಫ್ ಎಂದು ನಮೂದಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ತಿಳಿಸಿದ್ದಾರೆ.
ಗದಗ ಜಿಲ್ಲೆಯಲ್ಲಿನ ಆರ್.ಟಿ.ಸಿಗಳಲ್ಲಿ ವಕ್ಫ್ ಎಂದು ನಮೂದಾಗಿರುವ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, 1974ರ ಸರ್ಕಾರದ ಗೆಜೆಟ್ ಪ್ರಕಾರ ಜಿಲ್ಲೆಯ ಕೆಲವು ಆರ್.ಟಿ.ಸಿಗಳಲ್ಲಿ 2019ರಲ್ಲಿ ವಕ್ಫ್ ಎಂದು ನೋಂದಣಿಯಾಗಿವೆ. ವಕ್ಫ್ ಎಂದು ನೋಂದಣಿಯಾದ ಹಲವು ಆಸ್ತಿಗಳ ಮಾಲಿಕರು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯದ ಆದೇಶ ಮೇರೆಗೆ ಆರ್.ಟಿ.ಸಿಯಲ್ಲಿ ನಮೂದಾಗಿದ್ದ ವಕ್ಫ್ ಎಂಬ ಪದವನ್ನು ಸರಿಪಡಿಸಲಾಗಿದೆ ಎಂದು ತಿಳಿದಿದ್ದಾರೆ.
ಕೋಟುಮುಚಗಿ ಗ್ರಾಮದ ಸೋಮೇಶ್ವರ ದೇವಸ್ಥಾನ ಆಸ್ತಿಯ ಆರ್.ಟಿ.ಸಿಯಲ್ಲಿ ವಕ್ಫ್ ಎಂದು ನಮೂದಾಗಿರುವುದಿಲ್ಲ. ಈ ಕುರಿತು ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.