ವಿಜಯಸಾಕ್ಷಿ ಸುದ್ದಿ, ಗದಗ : ಗದುಗಿನ ಕರ್ನಾಟಕ ಕೀರ್ತನ ಕಲಾವೇದಿಕೆಯು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯದಿಂದ ನಗರದಲ್ಲಿ ವೇದಿಕೆಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಕೀರ್ತನೋತ್ಸವ ಕಾರ್ಯಕ್ರಮದಲ್ಲಿ ಧಾರವಾಡ ಆಕಾಶವಾಣಿಯ ನಿರೂಪಕಿ ಸುರೇಖಾ ಸುರೇಶ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸುರೇಖಾ, ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ನೆಲೆವೀಡಾದ ಗದುಗಿನಲ್ಲಿ ಕಲೆ ಸಮೃದ್ಧಿಗೊಂಡಿದೆ. ಇಲ್ಲಿನ ಕಲಾವಿದರು ತಮ್ಮ ಪ್ರಬುದ್ಧತೆಯಿಂದ ಕಲಾಸಂಪತ್ತನ್ನು ಉಳಿಸಿ ಬೆಳೆಸಿಕೊಂಡು ಬಂದಿರುವದು ಶ್ಲಾಘನೀಯ ಎಂದರು.
ನಾಡಿನ ಹಿರಿಯ ಕಲಾವಿದರಾಗಿರುವ ಪಂ.ಸಿದ್ಧೇಶ್ವರ ಶಾಸ್ತ್ರೀಗಳು ತೆಲ್ಲೂರ ಅವರು ಕಲಾವೇದಿಕೆಯ ಮೂಲಕ ನಾಡಿನಾದ್ಯಂತ ಕಾರ್ಯಕ್ರಮಗಳನ್ನು ನೀಡಿ ಹೆಸರಾಗಿದ್ದಾರೆ. ಅನೇಕ ಹಿರಿ-ಕಿರಿಯ ಕಲಾವಿದರಿಗೆ ವೇದಿಕೆ ಒದಗಿಸಿ ಸಂಗೀತ, ಸಾಹಿತ್ಯ, ಕೀರ್ತನ, ಪುರಾಣ ಕಲೆಯನ್ನು ಮುನ್ನಡೆಸಿದವರು ಎಂದರು.
ಸಿದ್ದೇಶ್ವರ ಶಾಸ್ತ್ರೀಗಳು ತೆಲ್ಲೂರ ಅವರು ವೇದಿಕೆಯ ಕಾರ್ಯವೈಖರಿ ಹಾಗೂ ಕಲಾವಿದರ ಕುರಿತು ಮಾತನಾಡಿದರು. ಸಮಾರಂಭದಲ್ಲಿ ಪಿಪಿಜಿ ಸಂಗೀತ ಮಹಾವಿದ್ಯಾಲಯ ಡಾ.ಶಿವಬಸಯ್ಯ ಗಡ್ಡದಮಠ, ಮಂಗಲಾ ಹಿರೇಮಠ, ರಾಜೇಶ್ವರಿ ಬೆಂಗಳೂರು, ಸ್ಪೂರ್ತಿ ಕೊಪ್ಪಳ, ಶೃತಿ ಗದಗ ಮುಂತಾದವರಿದ್ದರು.