ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ವಿಶಿಷ್ಟ ಪ್ರಾಚೀನ ಶಿಲ್ಪಕಲೆ, ಪರಂಪರೆ, ಧಾರ್ಮಿಕ, ಸಾಂಸ್ಕೃತಿಕ ವೈಭವಗಳ ಇತಿಹಾಸ ಹೊಂದಿರುವ ಪುಲಿಗೆರೆ ಶ್ರೀ ಸೋಮೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್.ಕೆ. ಪಾಟೀಲ ಹೇಳಿದರು.
ಅವರು ಸೋಮವಾರ ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಕ್ಷ ದೀಪೋತ್ಸವ ಸಮಾರಂಭದ ನಿಮಿತ್ತ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
ದೇವಸ್ಥಾನಗಳು ನಮ್ಮ ನಾಡಿನ ಸಂಸ್ಕೃತಿ, ಶ್ರೀಮಂತ ಪರಂಪರೆಯ ಪ್ರತೀಕವಾಗಿವೆ. ಸೋಮೇಶ್ವರ ದೇವಸ್ಥಾನದ ಮೂಲಭೂತ ಸೌಲಭ್ಯ ಕಲ್ಪಿಸುವ ಬಗ್ಗೆ ಈಗಾಗಲೇ ಒಂದಷ್ಟು ಅನುದಾನ ಕಲ್ಪಿಸಲಾಗಿದೆ. ಮುಖ್ಯವಾಗಿ ಉತ್ತರ ದ್ವಾರ ಅಭಿವೃದ್ಧಿಗಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ ಅನುದಾನ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದಷ್ಟು ಬೇಗ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದರು.
ರಾಜ್ಯದಲ್ಲಿ ನಮ್ಮ ನಾಡಿನ ಇತಿಹಾಸ, ಪರಂಪರೆ ಬಿಂಬಿಸುವ ೨೫ ಸಾವಿರಕ್ಕೂ ಹೆಚ್ಚು ಪುರಾತನ ದೇವಸ್ಥಾನ, ಶಿಲಾಶಾಸನಗಳು ಪ್ರಾಚ್ಯವಸ್ತು ಇಲಾಖೆ ವ್ಯಾಪ್ತಿಯಿಂದ ಹೊರಗುಳಿದಿವೆ. ಕೇವಲ ೮೫೧ ಸಂರಕ್ಷಿತ ತಾಣವೆಂದು ಗುರುತಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಈ ನಿಟ್ಟಿನಲ್ಲಿ ಇಚ್ಛಾಶಕ್ತಿ ತೋರಿದ್ದು, ಇದೇ ವರ್ಷ ೨೫೦ ಪ್ರಾಚೀನ ದೇವಸ್ಥಾನಗಳನ್ನು ಪ್ರಾಚ್ಯವಸ್ತು ಇಲಾಖೆಗೊಳಿಸಲಾಗುವುದು ಎಂದರು.
ಸೋಮೇಶ್ವರ ದೇವಸ್ಥಾನ ದರ್ಶನ ಪಡೆದು ದೇವಸ್ಥಾನ ವೀಕ್ಷಿಸಿ ಮಾಹಿತಿ ಪಡೆದ ಸಚಿವರನ್ನು ದೇವಸ್ಥಾನ ಭಕ್ತರ ಕಮಿಟಿ ಮತ್ತು ಹಿರಿಯರು ಸನ್ಮಾನಿಸಿದರು. ಈ ವೇಳೆ ಚಂಬಣ್ಣ ಬಾಳಿಕಾಯಿ, ವಿ.ಎಲ್. ಪೂಜಾರ, ಚನ್ನಪ್ಪ ಜಗಲಿ, ಸುಜಾತಾ ದೊಡ್ಡಮನಿ, ಬಸವೇಶ ಮಹಾಂತಶೆಟ್ಟರ, ಗುರಣ್ಣ ಪಾಟೀಲ ಕುಲಕರ್ಣಿ, ಆನಂದ ಮೆಕ್ಕಿ, ಅಶೋಕ ಬಟಗುರ್ಕಿ, ಪೂರ್ಣಾಜಿ ಖರಾಟೆ, ಶಂಕರ ಬಾಳಿಕಾಯಿ, ಶಿವಯೋಗಿ ಅಂಕಲಕೋಟಿ, ಸುಭಾ ಸಓದುನವರ, ಸೋಮೇಶ ಉಪನಾಳ, ಫಕ್ಕೀರೇಶ ಮ್ಯಾಟಣ್ಣವರ, ವಿರೂಪಾಕ್ಷ ಆದಿ, ಸುರೇಶ ರಾಚನಾಯ್ಕರ, ಫಕ್ಕಿರೇಶ ನಂದೆಣ್ಣವರ, ಬಸವರಾಜ ಮೆಣಸಿನಕಾಯಿ ಪ್ರಾಚ್ಯವಸ್ತು ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ, ಲಕ್ಕುಂಡಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ, ತಹಸೀಲ್ದಾರ ವಾಸುದೇವ ಸ್ವಾಮಿ, ಮುಖ್ಯಾಧಿಕಾರಿ ಮಹೇಶ ಹಡಪದ ಸೇರಿ ಅನೇಕರಿದ್ದರು.