ಬಳ್ಳಾರಿ: ನಮ್ಮದೇ ಸರ್ಕಾರ ಇದ್ದರೂ ಅನುದಾನ ಬಿಡುಗಡೆ ಆಗುತ್ತಿಲ್ಲ ಎಂದು ಶಾಸಕ ಎಚ್ ಆರ್ ಗವಿಯಪ್ಪತಮ್ಮದೇ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೇರೆ ಬೇರೆ ಕಡೆ ಅನುದಾನ ಸಿಗುತ್ತಿದೆ. ಆದರೆ ನನ್ನ ಕ್ಷೇತ್ರಕ್ಕೆ KKRDB ಸೇರಿದಂತೆ ಯಾವ ಅನುದಾನವೂ ಸರಿಯಾಗಿ ಸಿಗುತ್ತಿಲ್ಲ.
ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಎಲ್ಲವನ್ನು ತಿಳಿದುಕೊಳ್ಳುವುದ್ದಕ್ಕೆ ಒಂದೂವರೆ ವರ್ಷ ಕಳೆದು ಬಿಟ್ಟೆ. ಇನ್ನು ಎಷ್ಟು ವರ್ಷ ಹೀಗೆ ಅನುದಾನವಿಲ್ಲದೇ ಇರಲು ಸಾಧ್ಯ ಎಂದು ಹೇಳುವ ಮೂಲಕ ಸರ್ಕಾರಕ್ಕೆ ವಿರುದ್ಧ ಕಿಡಿಕಾರಿದ್ದಾರೆ.
ಈ ಹಿಂದೆ ಇದ್ದ ಬಿಜೆಪಿ ಶಾಸಕ ಆನಂದ್ ಸಿಂಗ್ ತಂದ ಅನುದಾನದಲ್ಲಿಯೇ ಒಂದೂವರೆ ವರ್ಷ ಕೆಲಸ ನಡೆದಿದೆ. ಈಗಲಾದರೂ ನಮಗೆ ಕೆಲಸ ಮಾಡಲು ಅನುದಾನ ಬೇಕಲ್ವಾ? ಕೆಕೆಆರ್‌ಡಿಬಿಯಿಂದ ನೂತನ ವಿಜಯನಗರ ಜಿಲ್ಲೆಗೆ ಒಟ್ಟು 348 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.
ವಿಜಯನಗರ ಜಿಲ್ಲೆಯ ಬೇರೆ ಬೇರೆ ಕ್ಷೇತ್ರಗಳಿಗೆ 60, 70 ಕೋಟಿ ರೂ. ಅನುದಾನ ನೀಡಿದ್ದಾರೆ. ವಿಜಯನಗರ ಕ್ಷೇತ್ರಕ್ಕೆ ಕೇವಲ 22 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ.ಅದರಲ್ಲಿ ಜಿಲ್ಲಾಸ್ಪತ್ರೆ ಕಟ್ಟಡಕ್ಕೆ 12 ಕೋಟಿ ರೂ. ಅನುದಾನ ನೀಡಿದ್ದೇನೆ. ಉಳಿದ 8 ಕೋಟಿ ರೂ. ಅನುದಾನದಲ್ಲಿ ಕ್ಷೇತ್ರದಲ್ಲಿ ಏನು ಕೆಲಸ ಮಾಡಲು ಸಾಧ್ಯವಾಗುತ್ತೆ ಎಂದು ಪ್ರಶ್ನಿಸಿದ್ದಾರೆ.