ಬೆಂಗಳೂರು: ತಂತ್ರಜ್ಞಾನ ವಲಯಕ್ಕೆ 52%ರಷ್ಟು ಉದ್ಯೋಗಿಗಳನ್ನು ಕರ್ನಾಟಕವೇ ಪೂರೈಕೆ ಮಾಡುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 27ನೇ ಆವೃತ್ತಿಯ ಬೆಂಗಳೂರು ಟೆಕ್ ಸಮ್ಮಿಟ್ 2024ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಯಂತ್ರೋಪಕರಣಗಳ ತಯಾರಿಕೆಯಲ್ಲಿಯೂ ಕರ್ನಾಟಕ ಮುಂದಿದ್ದು,
ಸುಮಾರು 85ಕ್ಕೂ ಹೆಚ್ಚು ಫ್ಯಾಬ್ಲೆಸ್ ಚಿಪ್ ವಿನ್ಯಾಸ ಘಟಕಗಳು ನಮ್ಮ ರಾಜ್ಯದಲ್ಲಿವೆ. ಸೆಮಿಕಂಡಕ್ಟರ್ ತಯಾರಿಕೆಗೆ ಕರ್ನಾಟಕವೇ ಆಧಾರ. ದೇಶದ ಜೈವಿಕ ತಂತ್ರಜ್ಞಾನ ವಲಯಕ್ಕೆ 52%ರಷ್ಟು ಉದ್ಯೋಗಿಗಳನ್ನು ಕರ್ನಾಟಕವೇ ಪೂರೈಕೆ ಮಾಡುತ್ತದೆ ಎಂದು ಹೇಳಿದರು.
ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಿದ ಕಾರಣಕ್ಕೆ ಇಂದು ನಮ್ಮ ನಗರ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ.
ಹಲವಾರು ಶಿಕ್ಷಣತಜ್ಞರು ಹೆಸರಾಂತ ಎಂಜಿನಿಯರಿಂಗ್ ಕಾಲೇಜುಗಳು, ತಂತ್ರಜ್ಞಾನ ಸಂಸ್ಥೆಗಳನ್ನು ಸ್ಥಾಪಿಸಿದ ಕಾರಣಕ್ಕೆ ಇಂದು ಬೆಂಗಳೂರು ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿದೆ. ಬೆಂಗಳೂರು ಬೆಳವಣಿಗೆಗೆ ನೆಹರು ಅವರು ಹಾಗೂ ಅನೇಕರ ದೂರದೃಷ್ಟಿಯ ಕೊಡುಗೆಯಿದೆ ಎಂದು ಹೇಳಿದರು.