ವಿಜಯಸಾಕ್ಷಿ ಸುದ್ದಿ, ಡಂಬಳ: ಮಠಗಳು ನಿರಂತರವಾಗಿ ಧಾರ್ಮಿಕ ಆಚಾರ-ವಿಚಾರಗಳ ಸಂಸ್ಕಾರ ನೀಡುವುದಲ್ಲದೆ, ಹಲವು ಮಠಗಳ ಮೂಲಕ ಶಿಕ್ಷಣ ಕ್ರಾಂತಿ, ಗದಗಿನ ಪುಟ್ಟರಾಜ ಕವಿ ಗವಾಯಿಗಳ ಮಠದಿಂದ ಸಂಗೀತ ಕ್ರಾಂತಿ, ಜಾತಿ, ಮತ, ಪಂಥ ಹೋಗಲಾಡಿಸಲು ಜಾತ್ಯಾತೀತ ತತ್ವದ ಮೂಲಕ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಮಠಗಳ ಕಾರ್ಯ ನಿರಂತರ ಎಂದು ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು ಹೇಳಿದರು.
ಡಂಬಳ ಹೋಬಳಿಯ ಹಿರೇವಡ್ಡಟ್ಟಿ ಗ್ರಾಮದ ಸರಕಾರಿ ಕನ್ನಡ ಶಾಲೆಯ ಆವರಣದಲ್ಲಿ ಮೃತ್ಯುಂಜಯ ಮಹಾಸ್ವಾಮಿಗಳ ಜಯಂತ್ಯುತ್ಸವ ಹಾಗೂ ಪ್ರವಚನ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಶ್ರೀಗಳು, ಟಿವಿ, ಮೊಬೈಲ್ ಬಳಕೆಯ ತಾಂತ್ರಿಕ ಯುಗದಲ್ಲಿಯೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಭಿನವ ಮೃತ್ಯುಂಜಯ ಶ್ರೀಗಳ ಪ್ರವಚನದಲ್ಲಿ ಪಾಲ್ಗೊಂಡು ಸದ್ವಿಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಮುಂದಾಗಿರುವುದು ಪ್ರಶಂಸನೀಯ ಎಂದು ಹೇಳಿದರು.
ವಿಜಯಪುರದ ಸದ್ಗುರು ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಮಾತನಾಡಿ, ಮನುಷ್ಯ ಅಧೈರ್ಯದಿಂದ ಇದ್ದಾಗ ಪ್ರವಚನದಂತಹ ನೆತ್ತಿ ತುಂಬುವ ವಿಚಾರಗಳು ಧೈರ್ಯ ತುಂಬುತ್ತವೆ. ಬದುಕಿನಲ್ಲಿ ಹೆಣ್ಣು, ಹೊನ್ನು ಮತ್ತು ಮಣ್ಣು ಕೊಡುವವರು ಇರುತ್ತಾರೆ. ಇದರ ಬದಲಾಗಿ ಸಂಸ್ಕಾರ ಕೊಡುವವರು ಬೇಕಾಗಿದ್ದಾರೆ. ಆ ನಿಟ್ಟಿನಲ್ಲಿ ಪ್ರವಚನದ ಮೂಲಕ ಒಳ್ಳೆಯ ಸಂಸ್ಕಾರ ಭಕ್ತರಲ್ಲಿ ಮನದಲ್ಲಿ ತುಂಬುವ ಕೆಲಸ ಮಾಡಿರುವುದು ಪ್ರಶಂಸನೀಯ ಎಂದು ಹೇಳಿದರು.
ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಯುವಕರು ಸಂಸ್ಕಾರಯುತ ಬದುಕು ಕಟ್ಟಲು, ರಾಜ್ಯಾದ್ಯಂತ ಸ್ವಾಮೀಜಿಯವರ ಕಾರ್ಯಗಳು ಯುವಕರನ್ನು ಉತ್ತಮ ಹಾದಿಯಲ್ಲಿ ಕೊಂಡೊಯ್ಯುತ್ತಿವೆ. ಮೃತ್ಯುಂಜಯ ಶ್ರೀಗಳು ಪವಾಡಗಳ ಮೂಲಕ ಅವರ ಭಕ್ತರಿಗೆ ಸರಿದಾರಿ ತೋರಿಸಿದ್ದರು. ಅವರು ಹಾಕಿಕೊಟ್ಟ ವಿಚಾರಗಳು ಚಿರಕಾಲ ಇರುತ್ತವೆ ಎಂದು ಹೇಳಿದರು.
ಕೆ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ, ಪ್ರವಚನಗಳ ಮೂಲಕ ಭಕ್ತರನ್ನು ಸರಿದಾರಿಯಲ್ಲಿ ಕೊಂಡೊಯ್ಯಲು ನಿರಂತರವಾಗಿ ಶ್ರಮಿಸುವ ಪರಮಪೂಜ್ಯ ಶ್ರೀಗಳ ಕಾರ್ಯಗಳು ಜನಮಾನಸದಲ್ಲಿ ನೆಲೆ ನಿಲ್ಲುವಂತೆ ಮಾಡಿದೆ ಎಂದು ಹೇಳಿದರು.
ಹಿರೇವಡ್ಡಟ್ಟಿಯ ಶಿವಾಚಾರ್ಯ ಶ್ರೀಗಳು, ಕೂಡಲ ನಂಜೇಶ್ವರಮಠದ ಮಹೇಶ್ವರ ಶಿವಾಚಾರ್ಯ ಶ್ರೀ, ಚನ್ನಬಸವ ದೇವರು, ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿದರು. ಕಾರ್ಯಕ್ರಮದಲ್ಲಿ ಆನಂದ ಗಡ್ಡದೇವರಮಠ, ಹೇಮಗಿರೀಶ ಹಾವಿನಾಳ, ಉದ್ದಿಮೆದಾರರಾದ ಮಂಜುನಾಥ ಹರ್ಲಾಪುರ, ರಾಜೇಶ ಹರ್ಲಾಪುರ, ಕಿರಣ ಪ್ರಕಾಶ ಬೂಮಾ, ಎಸ್.ಎಚ್. ಶಿವನಗೌಡರ, ನಾಗರಾಜ ಕಾಟರಳ್ಳಿ, ಮಂಜುನಾಥ ಕುರ್ತಕೋಟಿ, ಗುಳಪ್ಪ ಸಂಗನಾಳ, ಹನಮಪ್ಪ ಕಾಟರಳ್ಳಿ, ಶುಭಾಸರಡ್ಡಿ ಹಳ್ಳಿಗುಡಿ, ಶಿವಪ್ಪ ಅಂಕದ, ವಿರೇಶ ಜಲ್ಲಿಗೇರಿ, ಹನಮರಡ್ಡಿ ಮೇಟಿ, ಶರಣಪ್ಪ ಹಳ್ಳಿತಳವಾರ ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾದಿಗಳು ಇದ್ದರು.