ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಕಪ್ಪತಗುಡ್ಡದ 80 ಸಾವಿರ ಎಕರೆ ಅರಣ್ಯ ಪ್ರದೇಶವನ್ನು ಸಂರಕ್ಷಿತ ಜೀವ ವೈವಿಧ್ಯತಾ ತಾಣವನ್ನಾಗಿ ವಿಸ್ತರಿಸುವುದು ಮತ್ತು ಅದರ ಪರಿಧಿಯ 1ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಕೈಗೊಳ್ಳದಂತೆ ನಿಷೇಧಿಸಲು ಸರಕಾರವನ್ನು ಒತ್ತಾಯಿಸಲು ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಾಗೂ ಅನೇಕ ಪರಿಸರ ಸಂರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಂಘ-ಸAಸ್ಥೆಗಳ ಸಹಯೋಗದಲ್ಲಿ ಗುರುವಾರ ಬೆಳಗಾವಿ ವಿಭಾಗೀಯ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಪ್ಪತಗಿರಿ ನಂದಿವೇರಿ ಶ್ರೀಮಠದ ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ, ಕಪ್ಪತಗುಡ್ಡದ ಸಂರಕ್ಷಣಾ ವಿಷಯದಲ್ಲಿ ಮಲತಾಯಿ ಧೋರಣೆಯನ್ನು ಅನುಸರಿಸಿ ಆಗಾಗ ಸಂಕಷ್ಟಗಳನ್ನು ಸೃಷ್ಟಿಸುತ್ತಿರುವ ಕರ್ನಾಟಕ ಸರ್ಕಾರದ ಧೋರಣೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ. ಕಪ್ಪತಗುಡ್ಡದ ನೆಲ-ಜಲ ಜಾನುವಾರಗಳ ಹಾಗೂ ಜೀವ ವೈವಿಧ್ಯತೆಗಳ ಸಂರಕ್ಷಣೆಗಾಗಿ ಬದ್ಧವಿರಬೇಕಿದ್ದ ಸರಕಾರವು ಹಿತ್ತಿಲ ಬಾಗಿಲಿನಿಂದ ಗಣಿಗಾರಿಕೆಗೆ ಅವಕಾಶ ನೀಡುವ ಹುನ್ನಾರದೊಂದಿಗೆ ನೀತಿ ರೂಪಿಸಿ ಜನಸಾಮಾನ್ಯರ ಕಣ್ಣು ಒರೆಸುವ ತಂತ್ರ ಅನುಸರಿಸುತ್ತಿರುವುದು ತುಂಬಾ ದುರದೃಷ್ಟಕರ ವಿಷಯವಾಗಿದೆ ಎಂದರು.
ಕಪ್ಪತಗುಡ್ಡದ ಸಂರಕ್ಷಣಾ ಹೋರಾಟಗಾರರಾದ ರುದ್ರಣ್ಣ ಗುಳಗುಳಿ ಮಾತನಾಡಿ, ಗಣಿಗಾರಿಕೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ಈ ಹಿಂದೆ ಸರಕಾರವು ವ್ಯತಿರಿಕ್ತ ಆದೇಶ ಹೊರಡಿಸಿ ಕೈಸುಟ್ಟುಕೊಂಡು, ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಮತ್ತು ನಂದಿವೇರಿ ಶ್ರೀಮಠದ ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಇನ್ನಿತರ ೫೦ಕ್ಕೂ ಹೆಚ್ಚು ಮಠಾಧೀಶರ ನೇತೃತ್ವದಲ್ಲಿ ಹಾಗೂ ಗದಗ ಜಿಲ್ಲೆಯ ಅನೇಕ ನಾಗರಿಕ ಸಂಘಟನೆ ಮತ್ತು ಸಾರ್ವಜನಿಕರ ಹೋರಾಟದ ತೀವ್ರತೆಗೆ ಮಣಿದ ಸರ್ಕಾರ ಕಪ್ಪತಗುಡ್ಡದ ಕೆಲವೇ ಭಾಗವನ್ನು ಜೀವವೈವಿಧ್ಯತಾ ತಾಣವೆಂದು ಘೋಷಿಸಿದಾಗ ಹೋರಾಟ ತಾತ್ಪೂರ್ತಿಕವಾಗಿ ಸ್ಥಗಿತವಾಗಿದ್ದು ಈಗ ಇತಿಹಾಸ. ನಂತರದ ಪ್ರಶಾಂತ ವಾತಾರವಣವನ್ನು ತಪ್ಪಾಗಿ ಭಾವಿಸಿರುವ ಸರಕಾರವು ಈ ಭಾಗದ ಜನರ ರೋಷಕ್ಕೆ ಕಾರಣವಾಗಿದ್ದು ಜನಸಾಮಾನ್ಯರು ಸಿಡಿದೆದ್ದು ಸರ್ಕಾರ ಮತ್ತೊಮ್ಮೆ ಮುಜುಗರಕ್ಕೆ ಈಡಾಗುವುದರಲ್ಲಿ ಎರಡು ಮಾತಿಲ್ಲವೆಂದು ಹೇಳಿದರು.
ಪರಿಸರವಾದಿ ಬಾಲಚಂದ್ರ ಜಾಬಶೆಟ್ಟಿ ಮಾತನಾಡಿ, ಸಾಮಾಜಿಕ ಜಾಲತಾಣದ ಪ್ರಾಬಲ್ಯ ಅಷ್ಟೊಂದು ತೀವ್ರವಾಗಿರದ ಅಂದಿನ ದಿನಮಾನಗಳಲ್ಲಿ ವ್ಯಕ್ತವಾದ ಪ್ರತಿಭಟನೆಯನ್ನು ಸರ್ಕಾರ ಮರೆತಂತೆ ನಟಿಸಿದರೆ ಮತ್ತೆ ಮತ್ತೆ ತೀವ್ರ ಮುಖಭಂಗ ಅನುಭವಿಸಬೇಕಾಗುತ್ತದೆ. ಸಾಮಾಜಿಕ ಜಾಲತಾಣದ ಬೃಹತ್ ಶಕ್ತಿ 24 ಗಂಟೆಗಳ ಅವಧಿಯಲ್ಲಿ ಲಕ್ಷಾಂತರ ಜನರು ಸರ್ಕಾರದ ವಿರುದ್ಧ ಹೋರಾಟಕ್ಕೆ ಸನ್ನದ್ಧಗೊಳ್ಳುವ ಅಪಾಯದ ಅರಿವು ಇಂಟಲಿಜೆನ್ಸ್ ಇಲಾಖೆಯ ಮೂಲಕ ತಿಳಿದಿದ್ದರೂ ಮತ್ತೆ ಗಣಿಗಾರಿಕೆಗೆ ಅನುಮತಿ ನೀಡಲು ಸರಕಾರ ಹವಣಿಸುತ್ತಿರುವದು ಗಣಿ ಲಾಬಿಯ ಒತ್ತಡವನ್ನು ಅಚಿದಾಜಿಸಬಹುದು. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಹೇಳಿದರು.
ನ್ಯಾಯವಾದಿ ಸರಸ್ವತಿ ಪೂಜಾರ ಮಾತನಾಡಿ, ಕಪ್ಪತಗುಡ್ಡದ ಸಂರಕ್ಷಣೆಗೆ ಇಂದು ಜಾಗೃತ ಸಮಾಜ ಟೊಂಕ ಕಟ್ಟಿ ನಿಂತಿರುವುದರಿAದ ಯಾವ ಕಾಲಕ್ಕೂ ಗಣಿಗಾರಿಕೆ ನಡೆಸಲು ಬಿಡಲಾರೆವೆಂಬ ಸಾರ್ವಜನಿಕ ಸಂಕಲ್ಪವು ಸರಕಾರಗಳನ್ನೇ ಆಹುತಿ ತೆಗೆದುಕೊಳ್ಳುವುದರಲ್ಲಿ ಸಂಶಯವಿಲ್ಲ ಎಂದರು.
ಹುಬ್ಬಳ್ಳಿಯ ಕಾನೂನು ಮಹಾವಿದ್ಯಾಲಯದ ಸಂಗನಗೌಡ ಬಿರಾದಾರ ಮಾತನಾಡಿ, ಕಪ್ಪತಗುಡ್ಡದ ಜೊತೆಗೆ ಲಕ್ಷಾಂತರ ಜನರ ಭಾವಬಂಧ ಬೆಸೆಯುವ ಕಾರ್ಯವು ಚಾಲನೆಯಲ್ಲಿದ್ದು, ಕಪ್ಪತಗುಡ್ಡ ಸಂರಕ್ಷಣೆ ನಿಟ್ಟಿನಲ್ಲಿ ಸೂಕ್ತ ಮಾರ್ಗವನ್ನು ಅನುಸರಿಸಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ, ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ, ಪರಿಸರಕ್ಕಾಗಿ ನಾವು ರಾಜ್ಯ ಸಂಘಟನೆ, ಧಾರವಾಡ ಕೃಷಿ ವಿಶ್ವ ವಿದ್ಯಾಯಯದ ಹಳೆ ವಿದ್ಯಾರ್ಥಿಗಳ ಸಂಘಟನೆ, ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಆಯುರ್ವೇದ ಮಹಾವಿದ್ಯಾಯಗಳ ವಿದ್ಯಾರ್ಥಿಗಳು, ಗದಗ, ಧಾರವಾಡ, ಹಾವೇರಿ, ಬಾಗಲಕೋಟ, ಬೆಳಗಾವಿ ಜಿಲ್ಲೆಗಳ ಪರಿಸರಾಸಕ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಂಕರ ಕುಂಬಿ, ಎಮ್.ವಾಯ್. ಮೆಣಶಿನಕಾಯಿ, ಶಾರದಾ ಗೋಪಾಲ, ಅನಿತಾ ಪಾಟೀಲ, ಸುಭದ್ರಾ ಕುಲಕರ್ಣಿ, ನೈಲಾ ಕೋಯ್ಲೋ, ಕೆ.ಎಸ್. ನಾಯಕ, ಪರಿಮಳಾ ಜಕ್ಕಣ್ಣವರ, ಆರ್.ಜಿ. ತಿಮ್ಮಾಪೂರ, ಸ್ವಪ್ನಾ ಕರಬಶೆಟ್ಟರ, ದೀಪಕ ಕಟ್ಟಿಮನಿ, ವೀರೇಶ ಅರಕೇರಿ, ಅಸ್ಲಮ್ ಅಬ್ಬಿಹಾಳ ಮುಂತಾದವರು ಇದ್ದರು.