ವಿಜಯಸಾಕ್ಷಿ ಸುದ್ದಿ, ಧಾರವಾಡ: ಸಾರ್ಜನಿಕರ ಸಮಸ್ಯೆಗಳ ಪರಿಹಾರಕ್ಕೆ ಕರ್ನಾಟಕ ಲೋಕಾಯುಕ್ತ ಮೊದಲ ಆದ್ಯತೆ ನೀಡುತ್ತದೆ ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಮೂರ್ತಿ ಕೆ.ಎಂ. ಫಣೀಂದ್ರ ಹೇಳಿದರು.
ಅವರು ಧಾರವಾಡ ಜಿಲ್ಲಾ ಪಂವಾಯತ ಸಭಾಂಗಣದಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ಬಗ್ಗೆ ದೂರು ಸ್ವೀಕಾರ, ವಿಚಾರಣೆ ಹಾಗೂ ವಿಲೇವಾರಿ ಸಭೆ ಉದ್ಘಾಟಿಸಿ ಮಾತನಾಡಿದರು.
ಜೀವಿಸುವ ಹಕ್ಕು ಮೂಲಭೂತ ಹಕ್ಕಾಗಿದೆ. ಅದು ಪ್ರತಿಯೊಬ್ಬರು ಗೌರವಯುತವಾಗಿ ಬದುಕುವ ಅವಕಾಶ ಮತ್ತು ಹಕ್ಕನ್ನು ಪ್ರತಿನಿಧಿಸುತ್ತದೆ. ಉತ್ತಮ ಪ್ರಕೃತಿ, ನೆಲ, ಜಲ, ಮಣ್ಣು, ಪರಿಸರ ಕಾಪಾಡುವುದು ಮತ್ತು ಪಡೆಯುವುದು ನಮ್ಮ ಹಕ್ಕು ಮತ್ತು ಕರ್ತವ್ಯವಾಗಿದೆ. ಭಾರತದ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು ಮತ್ತು ರಾಜ್ಯ ನೀತಿ ನಿರ್ದೇಶಕ ತತ್ವಗಳು ಪರಸ್ಪರ ಸಂಬಂಧ ಹೊಂದಿವೆ ಎಂದು ನ್ಯಾಯಮೂರ್ತಿ ಫಣೀಂದ್ರ ತಿಳಿಸಿದರು.
ಆಧುನಿಕ ಸರಕಾರಗಳು ಉತ್ತಮವಾದ ಜೀವನ ಮಾಡಲು ಸವಲತ್ತುಗಳನ್ನು ನೀಡುತ್ತದೆ. ಪ್ರತಿಯೊಂದು ವ್ಯವಸ್ಥೆಯಲ್ಲಿ ಕಾನೂನಿನ ರಚನೆ ಇದೆ. ಮನುಷ್ಯನು ಆಸ್ತಿ-ಪಾಸ್ತಿಗಳನ್ನು ಕಾಪಾಡಿಕೊಳ್ಳುವಂತಹ ಕಾನೂನು ವ್ಯವಸ್ಥೆ ನಮ್ಮಲ್ಲಿ ಇದೆ. ಆಸ್ತಿ ಅಂತಸ್ತುಗಳ ಮೇಲೆ ವಿಲ್ ಮಾಡುವ ಮೂಲಕ ಆಸ್ತಿ ಹಕ್ಕುಗಳನ್ನು ಚಲಾಯಿಸಬಹುದು ಎಂದು ಅವರು ಹೇಳಿದರು.
ಕರ್ನಾಟಕ ಲೋಕಾಯುಕ್ತವು ನಿಯಮಾನುಸಾರ ಕರ್ತವ್ಯ ನಿರ್ವಹಿಸುವ ಸರಕಾರಿ ನೌಕರರಿಗೆ ಸಹಾಯ ಮಾಡುತ್ತದೆ. ಸುಳ್ಳು ದೂರು, ಕರ್ತವ್ಯ ನಿರ್ವಹಣೆಗೆ ಅಡಚಣೆ ಉಂಟಾದರೆ ತನಿಖೆ ಮಾಡಿ, ಸೂಕ್ತ ರಕ್ಷಣೆ ನೀಡುತ್ತದೆ. ಕರ್ತವ್ಯ ಲೋಪ ಮಾಡುವ ಅಧಿಕಾರಿ, ನೌಕರರ ವಿರುದ್ಧ ಲೋಕಾಯುಕ್ತ ಕಾಯ್ದೆ ಪ್ರಕಾರ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡುತ್ತದೆ ಎಂದು ತಿಳಿಸಿದರು.
ಸಾರ್ವಜನಿಕ ಸೇವೆಯೇ ನಮ್ಮ ಗುರಿ. ವಿನಾಕಾರಣ ವಿಳಂಬ, ತಪ್ಪು ಮಾಹಿತಿ, ನಿಧಾನಗತಿ ಅನುಸರಿಸುವ ಮೂಲಕ ಕರ್ತವ್ಯ ಲೋಪ ಮಾಡಬೇಡಿ. ಎಚ್ಚರಿಕೆಯಿಂದ ಮತ್ತು ಸೇವಾ ಮನೋಭಾವನೆಯಿಂದ ಕರ್ತವ್ಯ ನಿರ್ವಹಿಸಿ. ಪ್ರತಿಯೊಬ್ಬರಿಗೂ ಇರುವ ಹಕ್ಕುಗಳನ್ನು ಗೌರವಿಸಬೇಕು. ಮೂಲಭೂತ ಕರ್ತವ್ಯಗಳನ್ನು ಸಂರಕ್ಷಣೆ ಮಾಡಿಕೊಳ್ಳಬೇಕು. ನೀರು, ಗಾಳಿ ಸೇರಿದಂತೆ ಮೂಲಭೂತ ಸಂಪತ್ತುಗಳನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಯಾವುದೇ ರೀತಿಯ ಭ್ರಷ್ಟಾಚಾರ, ಪಕ್ಷಪಾತಗಳನ್ನು ಸರ್ಕಾರದ ಅಧೀನದಲ್ಲಿರುವ ಅಧಿಕಾರಿಗಳು ಮಾಡಬಾರದು. ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಕರ್ತವ್ಯ ಲೋಪವಾದರೆ ಸಾರ್ವಜನಿಕರ ಹಕ್ಕು ಉಲ್ಲಂಘನೆ ಆಗುತ್ತದೆ. ಸಂಬAಧಿಸಿದ ಅಧಿಕಾರಿಗಳು, ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಸರಿಪಡಿಸಬೇಕು ಎಂದು ತಿಳಿಸಿದರು.
ಲೋಕಾಯುಕ್ತ ಕಚೇರಿಯ ಬಗ್ಗೆ ಸಾರ್ವಜನಿಕರಿಗೆ ತಿಳಿಸಬೇಕು. ಲೋಕಾಯುಕ್ತದ 7, 8 ಮತ್ತು 9 ನೇ ಕಲಂಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಹೈಕೋರ್ಟ್ಗಳಿಗೆ ಇರುವ ಅಧಿಕಾರವನ್ನು ಕಲಂ 17ರಡಿಯಲ್ಲಿ ಲೋಕಾಯುಕ್ತವು ಕೂಡ ಹೊಂದಿದೆ ಎಂದು ನ್ಯಾಯಮೂರ್ತಿಗಳು ಹೇಳಿದರು.
ವೇದಿಕೆಯಲ್ಲಿ ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಉಪ ಪೊಲೀಸ್ ಆಯುಕ್ತರಾದ ಸಿ.ಆರ್. ರವೀಶ, ಮಾನಿಂಗ ನಂದಗಾವಿ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಕರ್ನಾಟಕ ಲೋಕಾಯುಕ್ತ ಬೆಂಗಳೂರು ಕಚೇರಿಯಲ್ಲಿನ ವಿವಾರಣಾ ವಿಭಾಗದ ಅಪರ ನಿಬಂಧಕರಾದ ಪಿ.ಶ್ರೀನಿವಾಸ, ನರಸಿಂಹಸಾ ಎಂ.ವಿ., ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ, ಸಿವಿಲ್ ನ್ಯಾಯಾಧೀಶ ಕಿರಣ ಪಿ.ಎಂ. ಪಾಟೀಲ್, ಧಾರವಾಡ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನುಮಂತರಾಯ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.