ರಾಮನಗರ: ಸೋಲಿನ ಹೊಣೆ ನಾನೇ ಹೊರುತ್ತೇನೆ, ನೆಮ್ಮದಿಯಿಂದ ಮಲಗುತ್ತೇನೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಚುನಾವಣೆ ಫಲಿತಾಂಶದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮೂರು ಬಾರಿ ಸೋತಿದ್ದೇನೆ ಒಪ್ಪಿಕೊಳ್ಳುತ್ತೇನೆ. ನಾನು ಗೆಲುವನ್ನು ನೋಡಿಲ್ಲ. ಇತಿಹಾಸ ನೋಡಿದರೆ ಅಬ್ರಾಹಂ ಲಿಂಕನ್, ಅಂಬೇಡ್ಕರ್, ವಾಜಪೇಯಿ ಸೋತಿದ್ದು ಹೇಳುತ್ತಾರೆ.
ಈ ಪರಿಸ್ಥಿತಿಯಲ್ಲಿ ಕಾರ್ಯಕರ್ತರಿಗೆ ಕೊಟ್ಟು ಅವರು ಸೋತಿದ್ದರೆ ಕುಟುಂಬ, ರಾಜಕಾರಣ, ಸ್ವಾರ್ಥ ಎಂಬ ಆರೋಪ ಬರುತ್ತಿತ್ತು. ಇವಾಗ ಈ ಹೊಣೆ ನಾನೇ ಹೊರುತ್ತೇನೆ ನೆಮ್ಮದಿಯಿಂದ ಮಲಗುತ್ತೇನೆ. ಈ ಒಂದು ಸೋಲಿನಿಂದ ಜಿಲ್ಲೆಯಲ್ಲಿ ಜೆಡಿಎಸ್ ಮುಕ್ತ ಅಂದುಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್‌ನವರು ಲೋಕಸಭೆಯಲ್ಲಿ ಸೋತರು ಅವರ ಬಲವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಾಗೆಯೇ ಈ ಗೆಲವಿನಿಂದ ಅವರ ಬಲ ಮತ್ತೆ ಹೆಚ್ಚಿದೆ ಎನ್ನಲು ಸಾಧ್ಯವಿಲ್ಲ. ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಸಂತೋಷವಾಗಿದೆ ಎಂದು ತಿಳಿಸಿದರು.
ಎಲ್ಲರೂ ಬಹಳ ಪ್ರಾಮಾಣಿಕವಾಗಿ ದುಡಿದಿದ್ದಾರೆ. ಆದರೆ ಚುನಾವಣೆ ಸೋಲಿಗೆ ಕೆಲವು ಕಾರಣ ಇರುತ್ತದೆ. ಒಂದು ಸಮುದಾಯದ ಮತ ಒಂದು ಕಡೆ ಕ್ರೋಢಿಕರಿಸಿದ್ದು ಕಾರಣ ಆಗಿರಬಹುದು. ನಮ್ಮ ಪಕ್ಷ ಸಾಕಷ್ಟು ಬಾರಿ ಆ ಸಮುದಾಯದ ಜೊತೆ ನಿಂತಿದ್ದೇವೆ. ಆದರೂ ಆ ಸಮುದಾಯ ನಮ್ಮ ಜೊತೆ ನಿಂತಿಲ್ಲ. ಎದೆಗುಂದಲ್ಲ ಹೋರಾಟದ ಹಿನ್ನೆಲೆಯಲ್ಲಿ ಈ ಪಕ್ಷ ಕಟ್ಟಿದ್ದೇವೆ. ವಯಸ್ಸು ಚಿಕ್ಕದಿದೆ ಎಲ್ಲವನ್ನೂ ಸಮಚಿತ್ತದಿಂದ ತಗೆದುಕೊಂಡಿದ್ದೇನೆ. ರಾಜ್ಯದ ನಿಷ್ಠಾವಂತ ಕಾರ್ಯಕರ್ತರೆಲ್ಲರಿಗೂ ಧ್ವನಿಯಾಗಿ ಇರುತ್ತೇನೆ ಎಂದರು.



