ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ನಲ್ಲಿ ಮಹತ್ವದ ವಿಚಾರಣೆ ನಡೆದಿದೆ. ಸಿದ್ದರಾಮಯ್ಯ ವಿರುದ್ದದ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಡಿ.10ಕ್ಕೆ ಮುಂದೂಡಿಕೆ ಮಾಡಿದೆ.
ಆರೋಪಿ ದೇವರಾಜು ಪರ ವಕೀಲರು ವಾದ ಮಂಡಿಸಿ, ವಿಭಾಗೀಯ ಪೀಠದಲ್ಲಿ ಡಿ.5 ಕ್ಕೆ ವಿಚಾರಣೆ ಬಾಕಿ ಇದೆ. ಹೀಗಾಗಿ ವಿಭಾಗೀಯ ಪೀಠದಲ್ಲಿ ವಿಚಾರಣೆ ಮುಕ್ತಾಯದ ಬಳಿಕ ಇಲ್ಲಿ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಸ್ನೇಹಮಯಿ ಕೃಷ್ಣ ಪರ ವಕೀಲ ಆಕ್ಷೇಪ ವ್ಯಕ್ತಪಡಿಸಿದರು. ಆ ಅರ್ಜಿ ಸಂದರ್ಭದಲ್ಲಿ ಇದನ್ನು ಮುಂದೂಡಬೇಕು ಅಂತ ಹೇಳಿಲ್ಲ ಎಂದು ಸ್ನೇಹಮಯಿ ಕೃಷ್ಣ ಪರ ವಕೀಲ ರಾಘವನ್ ತಿಳಿಸಿದರು.
ಅಲ್ಲದೇ, ಇಂದು ಲೋಕಾಯುಕ್ತ ವರದಿ ಪಡೆಯಿರಿ ಎಂದು ರಾಘವನ್ ಮನವಿ ಮಾಡಿದರು. ಅದಕ್ಕೆ ನ್ಯಾಯಾಧೀಶರು, ಇವತ್ತು ಅರ್ಜಿ ವಿಚಾರಣೆ ನಡುತ್ತಿಲ್ಲ. ಹೀಗಾಗಿ ಡಿ.10 ಕ್ಕೆ ಮುಂದೂಡಲಾಗುವುದು ಎಂದು ಆದೇಶಿಸಿದರು. ಡಿಸೆಂಬರ್ 10ರ ಮಧ್ಯಾಹ್ನ 2:30 ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ. ಅವತ್ತೇ ವಾದ-ಪ್ರತಿವಾದ ಮುಕ್ತಾಯ ಮಾಡಬೇಕು ಎಂದು ಸೂಚಿಸಿದರು.