ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಗದಗ-ಮುಂಡರಗಿ ತಾಲೂಕುಗಳ ಮಾರ್ಗಮಧ್ಯೆ ಕೇವಲ 60 ಕಿ.ಮೀ. ಅಂತರದಲ್ಲಿ ಪಾಪನಾಶಿ ಟೋಲ್, ಕೊರ್ಲಹಳ್ಳಿ ಟೋಲ್ ಸಂಗ್ರಹಣಾ ಘಟಕಗಳನ್ನು ನಿರ್ಮಿಸಲಾಗಿದ್ದು, ಈ ಟೋಲ್ ಸಂಗ್ರಹಣೆಯಿಂದ ಸಾರ್ವಜನಿಕರಿಗೆ ಅನ್ಯಾಯವಾಗುತ್ತಿದೆ. ಈ ಟೋಲ್ ಸಂಗ್ರಹಣೆಯನ್ನು ಸ್ಥಗಿತಗೊಳಿಸಬೇಕು ಎಂದು ಸ್ಥಳೀಯ ವಾಹನ ಮಾಲೀಕರ ಮತ್ತು ಚಾಲಕರ ಪರವಾಗಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಲಾರಿ ಚಾಲಕರ ಮಾಲೀಕರ ಸಂಘ ಹೊಸ ಡಂಬಳ ವತಿಯಿಂದ ಶಾಸಕ ಜಿ.ಎಸ್. ಪಾಟೀಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಟೋಲ್ ಸಂಗ್ರಹಣೆ ಲಾರಿ ಮಾಲೀಕರಿಗೆ, ಸಾರ್ವಜನಿಕರಿಗೆ ಹೊರೆಯಾಗುತ್ತಿದೆ. ಈಗಾಗಲೇ ವಾಹನ ಮಾಲೀಕರು ರಾಜ್ಯ ಸರ್ಕಾರಕ್ಕೆ ಸಾಕಷ್ಟು ತೆರಿಗೆಗಳನ್ನು ನೀಡುತ್ತಿದ್ದಾರೆ. ವಾಹನಗಳ ಖರ್ಚುಗಳನ್ನು ನಿಭಾಯಿಸುವುದೇ ಕಷ್ಟಕರವಾಗಿದೆ. ಈ ಎರಡು ಟೋಲ್ ಸಂಗ್ರಹಣೆಯಿಂದ ಬಸ್ ದರಗಳಲ್ಲಿ ಹೆಚ್ಚಿಗೆ ಮಾಡಲಾಗಿದ್ದು ಇದು ಸಹ ಸಾರ್ವಜನಿಕರಿಗೆ ಹೊರೆಯಾಗಿದೆ. ಪಾಪನಾಶಿ ಮತ್ತು ಕೊರ್ಲಹಳ್ಳಿ ಟೋಲ್ ಸಂಗ್ರಹಣೆ ಮಾಡುವುದನ್ನು ತಕ್ಷಣ ರದ್ದುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ವಿನಂತಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಚ್.ಡಿ. ದೊಡ್ಡಮನಿ, ಹುಚ್ಚುಸಾಬ ಅಮರಾವತಿ ಸೇರಿದಂತೆ ಸ್ಥಳೀಯ ಲಾರಿ ಮಾಲಕರು ಮತ್ತು ಚಾಲಕರು, ಸಂಘದ ಸದಸ್ಯರು ಉಪಸ್ಥಿತರಿದ್ದರು.