ವಿಜಯಸಾಕ್ಷಿ ಸುದ್ದಿ, ಗದಗ: ಗಣಿತ ಕಲಿಕಾ ಆಂದೋಲನದ ಮೂಲಕ ಗ್ರಾಮ ಮಟ್ಟದ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಸುಧಾರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಹೇಳಿದರು.
ನಗರದ ಜಿ.ಪಂ ಸಭಾಂಗಣದಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಅಕ್ಷರ ಫೌಂಡೇಶನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕಿರಣ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲಕ್ಕುಂಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆಂಚಪ್ಪ ಎಸ್.ಪೂಜಾರ್ ಮಾತನಾಡಿ, ಗಣಿತ ಕಲಿಕಾ ಆಂದೋಲನ ಮತ್ತು ಗಣಿತ ಸ್ಪರ್ಧೆಗಳ ಬಗ್ಗೆ ಮುಂಚಿತವಾಗಿ ಸಮಯ ನಿಗದಿ ಮಾಡಬೇಕು. ಅಂದಾಗ ಸ್ವಯಂ ಸೇವಕರ ನಿಯೋಜನೆ ಸೇರಿದಂತೆ ಉಳಿದ ಕಾರ್ಯಗಳನ್ನು ನಿರ್ವಹಿಸಲು ಸಿದ್ಧತೆ ಮಾಡಿಕೊಳ್ಳುತ್ತೇವೆ. ಈಗಾಗಲೇ ಗ್ರಾಮ ಪಂಚಾಯಿತಿ ಮಟ್ಟದ ಶಾಲೆಗಳಲ್ಲಿ ಶಿಕ್ಷಕರು ಉತ್ತಮವಾಗಿ ಬೋಧಿಸುತ್ತಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿಶೇಷ ಗಮನಹರಿಸಿ ಶಾಲೆಗಳಿಗೆ ಭೇಟಿ ನೀಡಿದಲ್ಲಿ ಶಾಲೆಗಳಲ್ಲಿ ಶಿಕ್ಷಕರು ಮನೋಬಲದಿಂದ ಬೋಧಿಸುತ್ತಾರೆ ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, ಶಾಲೆಗಳಿಗೆ ಮೊದಲು ವಿದ್ಯಾರ್ಥಿಗಳು ದಾಖಲಾಗಬೇಕು. ದಾಖಲಾದ ಮಗು ನಿಯಮಿತವಾಗಿ ಶಾಲೆಗೆ ಬರುವಂತೆ ನೋಡಿಕೊಳ್ಳಬೇಕು. ನಂತರ ಮಕ್ಕಳಿಗೆ ಗುಣಮಟ್ಟದ ಕಲಿಕೆಯಾಗಬೇಕು. ಗಣಿತ ಕಲಿಕಾ ಅಂದೋಲನವನ್ನು ಪ್ರತಿ ವರ್ಷ ಆಯೋಜಿಸಿ ಗಣಿತ ಸ್ಪರ್ಧೆ, ಕಾರ್ಯಾಗಾರ ಕೈಗೊಳ್ಳಲಾಗಿದೆ. ಗ್ರಾ.ಪಂ ಮಟ್ಟದ ಶಾಲೆಗಳಲ್ಲಿ ಅಕ್ಷರ ಫೌಂಡೇಶನ್ ನೀಡಿದ ಗಣಿತ ಕಿಟ್‌ಗಳನ್ನು ಬಳಸಿಕೊಂಡು ಮಕ್ಕಳಿಗೆ ಗಣಿತದ ಸಮಗ್ರ ಮಾಹಿತಿಯನ್ನು ಕಲಿಸಬಹುದು ಎಂದರು.
ಇದೇ ಸಂದರ್ಭದಲ್ಲಿ ಉತ್ತಮ ಫಲಿತಾಂಶವನ್ನು ಪಡೆದ ೨೫ ಶಾಲೆಗಳು ಮತ್ತು ೨೫ ಗ್ರಾಮ ಪಂಚಾಯಿತಿಗಳನ್ನು ಅಭಿನಂದಿಸಿ, ಗಣಿತ ಸ್ಪರ್ಧೆಗಳ ಗದಗ ಜಿಲ್ಲೆಯ ವರದಿಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ (ಅಭಿವೃದ್ಧಿ) ಉಪನಿರ್ದೇಶಕ ಜಿ.ಎಲ್. ಬಾರಾಟಕ್ಕೆ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಅಕ್ಷರ ಫೌಂಡೇಶನ್ ವಿಭಾಗೀಯ ವ್ಯವಸ್ಥಾಪಕರಾದ ಅಂಜಲೀನಾ ಗ್ರೇಗರಿ, ಪಂಚಾಯತ್ ರಾಜ್ ಇಲಾಖೆ ಸಹಾಯಕ ನಿರ್ದೇಶಕ ಅಶ್ವಿನಿ ಕುರಡಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿ.ಎಂ. ಹೀರೆಮಠ, ಎ.ಎನ್. ನಾಗರಳ್ಳಿ, ಮಾರುತಿ ಮಲ್ಲಾಪುರ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಪಿಡಿಓಗಳು, ಶಾಲಾ ಶಿಕ್ಷಕರು ಹಾಜರಿದ್ದರು.