ಪುರುಷರಿಗೆ ಇರುವಷ್ಟು ಸೌಕರ್ಯ, ಸೌಲಭ್ಯಗಳು ಮಹಿಳೆಯರಿಗೂ ದೊರಕಬೇಕು: ಸಿ.ಎಸ್. ಶಿವನಗೌಡ್ರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾರ್ಮಿಕ ಇಲಾಖೆ, ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗದಗ ಇವರ ವತಿಯಿಂದ ಮಿಷನ್ ಶಕ್ತಿ ಯೋಜನೆಯಡಿಯಲ್ಲಿ `ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆಯ ಅಂತಾರಾಷ್ಟ್ರೀಯ ದಿನದ ನಿಮಿತ್ತ ವಿಶೇಷ ಅರಿವು ಮೂಡಿಸುವ ಕಾರ್ಯಕ್ರಮವನ್ನು ಎ.ಸಿ.ಎಂ. ಗಾರ್ಮೆಂಟ್ಸ್ ಗದಗದಲ್ಲಿ ಹಮ್ಮಿಕೊಳ್ಳಲಾಗಿತ್ತು

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೆಲಸದ ಸ್ಥಳಗಳಲ್ಲಿ ಮಹಿಳೆ ನೆಮ್ಮದಿಯಿಂದ ಕಾರ್ಯ ನಿರ್ವಹಿಸುವಂತಾಗಲು 10ಕ್ಕಿಂತ ಹೆಚ್ಚು ಮಹಿಳಾ ಸಿಬ್ಬಂದಿ ಒಂದು ಕೆಲಸದ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಅಲ್ಲಿ ಆಂತರಿಕ ದೂರು ನಿವಾರಣಾ ಸಮಿತಿ ರಚಿಸಲು ಈಗಾಗಲೇ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇಂದು ಸ್ತ್ರೀ ಮತ್ತು ಪುರುಷರಿಬ್ಬರೂ ಸಮಾನರು. ಆದ್ದರಿಂದ ಪುರುಷರಿಗೆ ಇರುವಷ್ಟು ಸೌಕರ್ಯ, ಸೌಲಭ್ಯಗಳು ಮಹಿಳೆಯರಿಗೂ ದೊರಕಬೇಕು. ಒಂದು ವೇಳೆ ಯಾವುದೇ ರೀತಿಯ ದೌರ್ಜನ್ಯ, ಅನ್ಯಾಯಗಳು ಆಗುತ್ತಿದ್ದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಥವಾ ಇಲಾಖೆ, ಮಹಿಳಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಸಂಘ-ಸಂಸ್ಥೆಗಳನ್ನು ಸಂಪರ್ಕಿಸಿ ನ್ಯಾಯ ದೊರಕಿಸಿಕೊಳ್ಳಬೇಕೆಂದು ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ರಾಧಾ ಜಿ.ಮಣ್ಣೂರು  ಮಾತನಾಡಿ, ಮಿಷನ್ ಶಕ್ತಿ ಯೋಜನೆಯ ಕಾರ್ಯವೈಖರಿ ದೇಶಕ್ಕೆ ಮಾದರಿಯಾಗಬೇಕು. ಮಹಿಳೆಯರು ತಮಗೆ ರಾಜ್ಯ ಸರರ್ಕಾರ/ ಕೇಂದ್ರ ಸರ್ಕಾರಗಳು ನೀಡಿದ ಎಲ್ಲ ಯೋಜನೆಗಳ ಸೌಲಭ್ಯವನ್ನು ಪಡೆದುಕೊಂಡು ಅವರು ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಸಮಾಜದ ಎಲ್ಲ ಸ್ಥರದ ಮಹಿಳೆಯರನ್ನು ಜಾಗೃತಗೊಳಿಸುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲ ಅಧಿಕಾರಿಗಳ ಗುರುತರವಾದ ಜವಾಬ್ದಾರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ ಮಾತನಾಡಿ, ಇಲಾಖೆಯು ಈಗಾಗಲೇ ಮಹಿಳೆ ಮತ್ತು ಮಕ್ಕಳ ಕ್ಷೇತ್ರದಲ್ಲಿ ಗಣನೀಯವಾದ ಸೇವೆಯನ್ನು ನೀಡುತ್ತಿದೆ. ಮಹಿಳೆ ಮತ್ತು ಮಕ್ಕಳ ಅಪೌಷ್ಠಕತೆಯನ್ನು ಹೊಗಲಾಡಿಸಲು ಪೋಷಣ ಅಭಿಯಾನ, ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಯೋಜನೆ, ಹಲವಾರು ಸೇವೆಗಳು ಒಂದೇ ಕಡೆ ಸಿಗುಂತಾಗಲು ಸಖಿ ಒನ್ ಸ್ಟಾಪ್ ಸೆಂಟರ್, ಗರ್ಭಿಣಿ/ಬಾಣಂತಿಯರಿಗೆ ಆರ್ಥಿಕ ಸಹಾಯವಾಗಲು ಪ್ರಧಾನಮಂತ್ರಿ ಮಾತೃವಂದನಾ ಯೋಜನೆ, ಭಾಗ್ಯಲಕ್ಷ್ಮೀ/ಸುಕನ್ಯಾ ಸಮೃದ್ಧಿ ಯೋಜನೆ ಹೀಗೆ ಹಲವಾರು ಯೋಜನೆಗಳ ಜೊತೆಗೆ ಮಿಷನ್ ಶಕ್ತಿ ಯೋಜನೆಯು ಸಮಾಜದ ಪ್ರತಿಯೊಬ್ಬ ಹೆಣ್ಣು ಮಗು/ಮಹಿಳೆಯರಿಗೆ ಸುರಕ್ಷತೆ, ಭದ್ರತೆ ಹಾಗೂ ಸಬಲೀಕರಣಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀಕ್ಷಕಿ ಪ್ರಭಾವತಿ ಮುದಿಗೌಡರ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ ಮಿನಜಗಿ, ಎಸಿಎಂ ಗಾರ್ವ್ಮೆಂಟ್ಸ್ನ ಅಶೋಕ ರಾಠೋಡ, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಶ್ರೀಧರ ಪೂಜಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here