ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಅಕ್ಟೋಬರ್ ತಿಂಗಳಿನಲ್ಲಿ ಅಬ್ಬಿಗೇರಿಯಲ್ಲಿ ನಡೆದ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಮಹೋತ್ಸವದಲ್ಲಿ ಜಗದ್ಗುರು ಪೀಠದಿಂದ `ಸಾಧನ ಸಿರಿ’ ಪ್ರಶಸ್ತಿಯನ್ನು ಪಡೆದ ಪಟ್ಟಣದ ಹಿರೇಮಠ ಸ್ವಾಮೀಜಿಯವರನ್ನು ಬೀಚಿ ಬಳಗದಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ಮಲ್ಲಿಕಾರ್ಜುನ ಶ್ರೀಗಳು, ನಮ್ಮ ಮಠದ ಆವರಣದಲ್ಲಿ ಕಳೆದ ಹತ್ತು ವರ್ಷಗಳಿಂದ ಬೀಚಿ ಬಳಗದ ಕಾರ್ಯಗಳು ನಡೆಯುತ್ತ ಬಂದಿದ್ದನ್ನು ನೋಡಿದ್ದೇವೆ. ನರೇಗಲ್ಲ ಹೋಬಳಿಯಲ್ಲಿ ಸಾಹಿತ್ತಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಬೀಚಿ ಬಳಗವು ಈ ಭಾಗದ ಅಷ್ಟೇ ಅಲ್ಲದೆ ಜಿಲ್ಲೆಯ ಎಲ್ಲ ಸಾಹಿತ್ಯ ಪ್ರಿಯರ ಮನಸ್ಸನ್ನು ಗೆದ್ದಿದೆ. ನಾನು ಕಂಡಿರುವAತೆ ಬರೀ ಗದಗ ಜಿಲ್ಲೆಯಲ್ಲಷ್ಟೇ ಅಲ್ಲದೆ ನಾನು ಹೋದೆಡೆಯಲ್ಲೆಲ್ಲ ಈ ಬೀಚಿ ಬಳಗದ ಮಾತು ಬಂದೇ ಬರುತ್ತದೆ. ಅಂದರೆ ಬೀಚಿ ಬಳಗ ಅಷ್ಟೊಂದು ಪ್ರಸಿದ್ಧಿಯನ್ನು ಪಡೆದಿದೆ ಎಂದರು.
ಇಂದು ಬೀಚಿ ಬಳಗದವರು ನಮ್ಮನ್ನು ಸನ್ಮಾನಿಸಿದ್ದು ನಮಗೆ ಅತ್ಯಂತ ಸಂತಸವಾಗಿದೆ. ಬೀಚಿ ಬಳಗದ ಕಾರ್ಯಕ್ರಮದ ನಿಮಿತ್ತ ನಮ್ಮ ನರೇಗಲ್ಲಿಗೆ ನಾಡಿನ ಹಾಸ್ಯ ದಿಗ್ಗಜರಾದ ಗಂಗಾವತಿ ಪ್ರಾಣೇಶ್, ಬಸವರಾಜ ಮಹಾಮನಿ, ನರಸಿಂಹ ಜೋಷಿ, ಅನಿಲ ವೈದ್ಯ ಅವರಲ್ಲದೆ, ಹರಟೆಯ ಮಲ್ಲ, ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಅವರಂತಹವರನ್ನು ಕಾಣುವ, ಅವರ ಮಾತುಗಳನ್ನು ಕೇಳುವ ಸೌಭಾಗ್ಯ ನಮ್ಮೆಲ್ಲರದ್ದಾಗಿದೆ. ಇಂತಹ ಅಪರೂಪದ ಸಾಹಿತ್ತಿಕ ರಸದೌತಣ ನೀಡುತ್ತಿರುವ ಬೀಚಿ ಬಳಗವು ಇನ್ನೂ ಉನ್ನತವಾಗಿ ಬೆಳೆದು ಈ ಭಾಗದ ಸಾಹಿತಿಗಳನ್ನು ಬೆಳೆಸುವಂತಾಗಲಿ ಎಂದು ಹಾರೈಸಿದರು.
ಅರುಣ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯನ್ನುದ್ದೇಶಿಸಿ ಎಂ.ಎಸ್. ದಢೇಸೂರಮಠ, ಸುರೇಶ ಹಳ್ಳಿಕೇರಿ, ಡಾ. ಆರ್.ಕೆ. ಗಚ್ಚಿನಮಠ, ಎಂ.ಕೆ. ಬೇವಿನಕಟ್ಟಿ, ಭಾರತಿ ಶಿರ್ಸಿ, ನಿರ್ಮಲಾ ಹಿರೇಮಠ ಮಾತನಾಡಿದರು. ವೇದಿಕೆಯ ಮೇಲೆ ಪಂ. ಅನ್ನದಾನಶಾಸ್ತಿçಗಳು, ಸಿದ್ದಿ, ಆದರ್ಶ ಕುಲಕರ್ಣಿ, ಹುಚ್ಚೀರಪ್ಪ ಈಟಿ, ಶಿವಯೋಗಿ ಜಕ್ಕಲಿ ಇನ್ನೂ ಮುಂತಾದವರಿದ್ದರು. ಬಿ.ಬಿ. ಕುರಿ ನಿರೂಪಿಸಿದರು. ಸಂಚಾಲಕ ಈಶ್ವರ ಬೆಟಗೇರಿ ವಂದಿಸಿದರು.



