ವಿಜಯಸಾಕ್ಷಿ ಸುದ್ದಿ, ಗದಗ: ಯಾವುದೇ ವ್ಯಕ್ತಿ ನಮಗೆ ಪ್ರತಿಸ್ಪರ್ಧಿಯಾಗಿ ಕಂಡರೆ ಅವರಿಗಿಂತ ಪ್ರಾವೀಣ್ಯತೆ ಸಾಧಿಸಬೇಕೇ ವಿನಃ ಅವರನ್ನು ದ್ವೇಷಿಸುತ್ತಾ ಮರ್ದನಕ್ಕೆ ಮುಂದಾಗಬಾರದು ಎಂದು ಪ್ರವಚನ ಭಾಸ್ಕರ ಡಾ. ಪಾವಗಡ ಪ್ರಕಾಶ್ ರಾವ್ ನುಡಿದರು.
ಅವರು ಇಲ್ಲಿನ ಕುಮಾರವ್ಯಾಸ ಪ್ರವಚನ ಸಂಚಾಲನ ಸಮಿತಿ ಏರ್ಪಡಿಸಿರುವ ಭಗವದ್ಗೀತಾ ಪ್ರವಚನದ 14ನೇ ದಿನದ ಪ್ರವಚನ ನೀಡಿ ಮಾತನಾಡಿ,
ಮಹಾಭಾರತದಲ್ಲಿ ಭೀಷ್ಮಾಚಾರ್ಯರು ಕೌರವರ ನಡೆಗಳನ್ನು ಸಮರ್ಥಿಸಿಕೊಳ್ಳಲಿಲ್ಲವಾದರೂ ಮೌನವಾಗಿ ಇದ್ದು ತಮ್ಮ ಕೀರ್ತಿಯನ್ನು ಕುಂದಿಸಿಕೊಂಡರು. ಅದೇ ರೀತಿ ಪ್ರಜ್ಞಾವಂತ ನಾಗರಿಕರಾದ ನಾವು ಈ ದೇಶದ, ಸಮಾಜದ ಆರೋಗ್ಯಕ್ಕಾಗಿ ಧ್ವನಿ ಎತ್ತದೇ ಹೋದಲ್ಲಿ ದೇಶ ಹಾನಿಗೆ ಒಳಗಾಗುತ್ತದೆ.
ಭೀಷ್ಮಾಚಾರ್ಯರು ತ್ಯಾಗಕ್ಕೆ ಹಾಗೂ ಪರಮಭಕ್ತಿಗೆ ಸಂಕೇತವಾಗಿದ್ದು, ಮಹಾಭಾರತ ಯುದ್ಧದ ಸಮಯದಲ್ಲಿ ಅವರ ಹಾಗೂ ಕೃಷ್ಣರ ನಡುವೆ ನಡೆಯುವ ಪ್ರಹಸನ ಹೃದಯಂಗಮವಾಗಿದೆ. ದ್ರೋಣಾಚಾರ್ಯರಿಗೆ ಪೂಜ್ಯವಾದ ಸ್ಥಾನ ಇದ್ದರೂ ಸಹ ಏಕಲವ್ಯನ ವಿಷಯ ಸೇರಿದಂತೆ ಕೆಲವು ಸಂದರ್ಭಗಳಲ್ಲಿ ದ್ರೋಣಾಚಾರ್ಯರಿಂದ ಕಲಿಯಬಾರದ ಪಾಠಗಳೂ ಇವೆ. ಕುರುಕ್ಷೇತ್ರದ ಅನೇಕ ಪ್ರಹಸನಗಳಲ್ಲಿ ಕ್ಷಾತ್ರ ಸಂಬಂಧಗಳನ್ನು ಮರೆಸುತ್ತದೆ ಎಂದರು.
ಸಾವಿರಾರು ವರ್ಷಗಳ ಇತಿಹಾಸ ಅವಲೋಕಿಸಿದರೆ ಭಾರತ ಯುದ್ಧ ಪಿಪಾಸು ರಾಷ್ಟ್ರವಲ್ಲ ಎಂಬುದು ಸಾಬೀತಾಗಿದೆ, ಆದರೆ ತಮ್ಮ ಮೇಲೆ ಎರಗಿ ಬಂದವರನ್ನು ಬಡಿದೋಡಿಸುವ ಕ್ಷಾತ್ರವನ್ನೂ ಭಾರತ ತೋರಿದೆ ಎಂದರು.
ಡಾ.ಕಲ್ಲೇಶ ಮೂರಶಿಳ್ಳಿನ ನಿರೂಪಿಸಿ ವಂದಿಸಿದರು. ಮಾಜಿ ಶಾಸಕರಾದ ಡಿ.ಆರ್ ಪಾಟೀಲ, ಗುರಣ್ಣ ಬಳಗಾನೂರ, ಡಾ.ಎಸ್.ಎಸ್ ಶೆಟ್ಟರ್, ಡಾ.ಜಿ.ಬಿ ಪಾಟೀಲ, ಅನಿಲ ವೈದ್ಯ, ವಾದಿರಾಜ ರಾಯ್ಕರ, ಡಾ.ಎಸ್.ಡಿ ಯರಿಗೇರಿ, ಡಾ.ವಿಜಯದತ್ತ ಮಂಗಸೂಳಿ, ಗೋಪಾಲಕೃಷ್ಣ ತಾಸಿನ, ಶಶಿಧರ ಮೂರಶಿಳ್ಳಿನ, ಅನಿಲ ತೆಂಬದಮನಿ, ಗೌರಪ್ಪ ಬೊಮ್ಮಣ್ಣನವರ, ಶ್ರೀಮತಿ ಬಿ.ವಿ ಹಿರೇಮಠ, ಡಾ.ದತ್ತಪ್ರಸನ್ನ ಪಾಟೀಲ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.