ವಿಕ್ರಾಂತ್ ರೋಣ ಸಿನಿಮಾದ ಬಳಿಕ ಸುದೀಪ್ ನಟನೆಯ ಮುಂದಿನ ಸಿನಿಮಾಗೆ ಅಭಿಮಾನಿಗಳು ಕಾಯ್ತಿದ್ದಾರೆ. ಸದ್ಯ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ರಿಲೀಸ್ ಗೆ ಎದುರು ನೋಡ್ತಿದ್ದು ಚಿತ್ರ ಕಣ್ಮುಂಬಿಕೊಳ್ಳಲು ಅಭಿಮಾನಿಗಳು ಕಾಯ್ತಿದ್ದಾರೆ. ಸದ್ಯ ಮ್ಯಾಕ್ಸ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.
‘ಮ್ಯಾಕ್ಸ್’ ಸಿನಿಮಾ ತಂಡದಿಂದ ಬಿಗ್ ಅಪ್ಡೇಟ್ ಸಿಕ್ಕಿದೆ. ‘ಸರೆಗಮ ಕನ್ನಡ’ ಯೂಟ್ಯೂಬ್ನಲ್ಲಿ ಟೀಸರ್ ಬಿಡುಗಡೆ ಮಾಡುವ ಮೂಲಕ ರಿಲೀಸ್ ಡೇಟ್ ಬಗ್ಗೆ ಅಪ್ಡೇಟ್ ನೀಡಲಾಗಿದೆ. ನವೆಂಬರ್ 27ರಂದು ‘ಮ್ಯಾಕ್ಸ್’ ಸಿನಿಮಾ ಬಗ್ಗೆ ದೊಡ್ಡ ಅನೌನ್ಸ್ಮೆಂಟ್ ಆಗಲಿದೆ ಎಂದು ನಿರ್ಮಾಪಕರು ಇತ್ತೀಚೆಗೆ ತಿಳಿಸಿದ್ದರು. ಅದರಂತೆ, ಇಂದು ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಡಿಸೆಂಬರ್ 25ರಂದು ವಿಶ್ವಾದ್ಯಂತ ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಆಗಲಿದೆ.
2022ರ ಜುಲೈನಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾ ತೆರೆಕಂಡಿತ್ತು. ಆ ಬಳಿಕ ಸುದೀಪ್ ಅಭಿನಯದ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ಇಷ್ಟು ದೊಡ್ಡ ಗ್ಯಾಪ್ ಆಗಿದ್ದಕ್ಕೆ ಸುದೀಪ್ ಅವರ ಅಭಿಮಾನಿಗಳಿಗೆ ಬೇಸರ ಇದೆ. ‘ವಿಕ್ರಾಂತ್ ರೋಣ’ ಬಳಿಕ ಸುದೀಪ್ ಒಪ್ಪಿಕೊಂಡ ಸಿನಿಮಾ ‘ಮ್ಯಾಕ್ಸ್’. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಕಳೆದ ವರ್ಷವೇ ಬಿಡುಗಡೆ ಆಗಬೇಕಿತ್ತು. ಆದರೆ ಒಂದಷ್ಟು ಕಾರಣಗಳಿಂದಾಗಿ ಸಿನಿಮಾದ ಬಿಡುಗಡೆ ತಡವಾಗಿದ್ದು ಇದೀಗ ರಿಲೀಸ್ ಗೆ ರೆಡಿಯಾಗಿದೆ.
ಸುದೀಪ್ ನಟನೆಯ ಮ್ಯಾಕ್ಸ್ ಪಕ್ಕಾ ಮಾಸ್ ಆಕ್ಷನ್ ಸಿನಿಮಾವಾಗಿದ್ದು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ, ಕಲೈಪುಲಿ ಎಸ್ ಥಾನು, ವಿ ಕ್ರಿಯೇಷನ್ಸ್ ಬ್ಯಾನರ್ ಮತ್ತು ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.