ಕಾಲಿವುಡ್ ನಟಿ, ಮಹಾನಟಿ ಖ್ಯಾತಿ ಕೀರ್ತಿ ಸುರೇಶ್ ಮದುವೆ ವಿಚಾರ ಸಖತ್ ಸದ್ದು ಮಾಡಿತ್ತು. ಈ ಹಿಂದೆ ಹಲವರ ಜೊತೆ ಕೀರ್ತಿ ಹೆಸರು ಕೇಳಿ ಬಂದಿತ್ತು. ಆದರೆ ಅದ್ಯಾವುದಕ್ಕೂ ನಟಿ ಕ್ಯಾರೆ ಎಂದಿರಲಿಲ್ಲ. ತಾನಾಯಿತು ತನ್ನಕೆಲಸವಾಯಿತು ಅಂತಿದ್ದ ನಟಿ ಕೀರ್ತಿ ಸುರೇಶ್ ಕೊನೆಗೂ ಮದುವೆಗೆ ಮನಸ್ಸು ಮಾಡಿದ್ದಾರೆ. ಜೊತೆಗೆ ತಮ್ಮ ಬಹುಕಾಲದ ಪ್ರೀತಿಯ ಬಗ್ಗೆ ಹೇಳಿಕೊಂಡಿರುವ ಕೀರ್ತಿ ಸುರೇಶ್ ಮದುವೆಯಾಗುತ್ತಿರುವ ಹುಡುಗನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹೌದು. ನಟಿ ಕೀರ್ತಿ ಸುರೇಶ್ ಬಹುಕಾಲದ ಗೆಳೆಯ, ಉದ್ಯಮಿ ಆಂಟೋನಿ ತಟ್ಟಿಲ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಭಾವಿ ಪತಿ ಆಂಟೋನಿ ಜೊತೆಗಿನ ಫೋಟೋ ಶೇರ್ ಮಾಡಿ, 15 ವರ್ಷಗಳ ಬಂಧ ಎಂದು ನಟಿ ಬರೆದುಕೊಂಡಿದ್ದಾರೆ. ಯಾವಾಗಲೂ ಆಂಟೋನಿ ಮತ್ತು ಕೀರ್ತಿ ಎಂದು ಕ್ಯಾಪ್ಷನ್ ನೀಡಿದ್ದಾರೆ.
ಕೀರ್ತಿ ಹಾಗೂ ಆ್ಯಂಟೋನಿ ಬಾಲ್ಯದ ಗೆಳೆಯರು. 16ನೇ ವಯಸ್ಸಿನಲ್ಲಿ ಕೀರ್ತಿಗೆ ಆ್ಯಂಟೋನಿ ಪರಿಚಯ ಆಯಿತು. ಆ ಗೆಳೆತನ ನಂತರ ಪ್ರೀತಿಗೆ ತಿರುಗಿದೆ. ಈ ವಿಚಾರವನ್ನು ಕೀರ್ತಿ ಅವರೇ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. 15 ವರ್ಷಗಳ ಪ್ರೀತಿಯಲ್ಲಿದ್ದ ಕೀರ್ತಿ ಸುರೇಶ್ ಹಾಗೂ ಆಂಟೋನಿ ಡಿ.11ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಗೋವಾದಲ್ಲಿ ಮದುವೆ ನಡೆಯಲಿದ್ದು ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಪ್ಲ್ಯಾನ್ ಮಾಡಲಾಗಿದೆಯಂತೆ. ಆಪ್ತರಿಗಷ್ಟೇ ಮದುವೆಗೆ ಆಹ್ವಾನ ನೀಡುತ್ತಿದ್ದು ಬಳಿಕ ಜೋಡಿ ಗ್ರ್ಯಾಂಡ್ ಆಗಿ ರಿಸೆಪ್ಷನ್ ಮಾಡಿಕೊಳ್ಳಲಿದ್ದಾರಂತೆ. ಆಂಟನಿ ಅವರು ಕೇರಳದ ಕೊಚ್ಚಿಯವರು. ಪ್ರಮುಖ ರೆಸಾರ್ಟ್ ಮಾಲೀಕರಾಗಿದ್ದಾರೆ ಎನ್ನಲಾಗಿದೆ.