ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಆಯಾ ರಾಜ್ಯದ ಭಾಷೆಯಲ್ಲಿ ಒಂದರಿಂದ ಹತ್ತನೆಯ ತರಗತಿಯವರಿಗೆ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಜರೂರತ್ತಿದೆ. ಹಾಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವ ಅವಶ್ಯಕತೆ ಇದೆಯೆಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯಪಟ್ಟರು.
ಸ್ಥಳೀಯ ಸರಕಾರಿ ಪ್ರಥಮದರ್ಜೆ ಮಹಿಳಾ ಪದವಿ ಕಾಲೇಜಿನಲ್ಲಿ ಗುರುವಾರದಂದು ಕಾಲೇಜಿನ ಕನ್ನಡ ವಿಭಾಗ ಆಯೋಜನೆ ಮಾಡಿದ್ದ `ಕನ್ನಡ ಕ್ರಿಯಾ ವೇದಿಕೆ’ ವಿದ್ಯಾರ್ಥಿ ಘಟಕ ಉದ್ಘಾಟನೆ ಮತ್ತು ರಾಜತ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾತೃಭಾಷೆ ಶಿಕ್ಷಣ ಬಲಶಾಲಿಯಾದದ್ದು. ಅದರಲ್ಲೇ ಮಕ್ಕಳು ಕಲಿತರೆ ವಿಷಯ ಚೆನ್ನಾಗಿ ಅರ್ಥವಾಗುತ್ತದೆ. ಹಾಗಾಗಿ ಎಲ್ಲ ರಾಜ್ಯಗಳು ಈ ದಿಶೆಯಲ್ಲಿ ಆಲೋಚಿಸುವ ಅಗತ್ಯವಿದೆ. ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಮನಸ್ಸಿಟ್ಟು ಓದಬೇಕು. ಓದಿದ್ದು ಮನನವಾದರೆ ಅವರ ಭವಿಷ್ಯ ಚೆನ್ನಾಗಿ ಇರಬಲ್ಲುದು ಎಂದರು.
ಶಿಕ್ಷಣ ಪ್ರೇಮಿ ಬಿ.ಜಿ ಕರಿಗಾರ ಮಾತನಾಡುತ್ತ, ವಿದ್ಯಾರ್ಥಿಗಳು ಕುವೆಂಪು, ಬೇಂದ್ರೆ ಇನ್ನಿತರ ಸಾಹಿತಿಗಳ ಪುಸ್ತಕಗಳನ್ನು ಓದಬೇಕು. ನಮ್ಮ ಹಿರಿಯರ ಪ್ರತಿಫಲವಾಗಿ ಕರ್ನಾಟಕ ರಾಜ್ಯ ಉದಯವವಾಗಿದೆ. ಕನ್ನಡ ಮಾದ್ಯಮದಲ್ಲಿ ಓದಿದವರು ಉನ್ನತ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಹುಲಿಗೆಮ್ಮ ಮಾತನಾಡಿದರು. ವೇದಿಕೆಯಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ. ಗವಿಸಿದ್ದಪ್ಪ ಮುತ್ತಾಳ, ಡಾ. ಪ್ರದೀಪ್ ಕುಮಾರ್, ಡಾ. ನರಸಿಂಹ, ಡಾ. ಅಶೋಕ ಕುಮಾರ್, ಸುಮಿತ್ರ, ಶುಭ, ಶಿವ ಪ್ರಸಾದ್ ಹಾದಿಮನಿ, ಡಾ. ಮಂಜಪ್ಪ, ಡಾ. ಸೂರಪ್ಪ, ವಿರೂಪಾಕ್ಷಪ್ಪ, ಮುತ್ತಾಳ ಮುಂತಾದವರಿದ್ದರು.
ಕಾವೇರಿ, ನೇತ್ರ ಮತ್ತು ಸಬಿಹಾ ಪ್ರಾರ್ಥನೆ ಗೀತೆ ಹಾಡಿದರು. ಗೀತಾ ಭಜಂತ್ರಿ ಸ್ವಾಗತಿಸಿದರು. ಭೂಮಿಕಾ ಹೂಗಾರ ನಿರೂಪಣೆ ಮಾಡಿದರು. ಗಂಗಮ್ಮ ವಂದಿಸಿದರು.