ನಗರಸಭೆಗೆ ಅದಾಯದ ಮೂಲಗಳ ಕೊರತೆ ಇರುವದರಿಂದ ನಿರೀಕ್ಷಿತ ಅಭಿವೃದ್ಧಿಯಾಗುತ್ತಿಲ್ಲ: ಟಿ.ಎಚ್. ದ್ಯಾವನೂರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರಸಭೆಯ 2025-26ನೇ ಸಾಲಿನ ಅಯವ್ಯಯ ಕುರಿತ ಸಾರ್ವಜನಿಕ ಸಮಾಲೋಚನೆಯ ಮೊದಲ ಸುತ್ತಿನ ಸಭೆಯಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಯ ಪ್ರತಿನಿಧಿಗಳು ತಮ್ಮ ಅನಿಸಿಕೆ- ಅಭಿಪ್ರಾಯಗಳನ್ನು ಮಂಡಿಸಿ, ಅವಳಿ ನಗರದ ಅಭಿವೃದ್ಧಿ ಪೂರಕವಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

Advertisement

ಇದಕ್ಕೂ ಮುನ್ನ ನಗರಸಭೆಯ ಅಕೌಂಟೆಂಟ್ ಸೂಪರಿಡೆಂಡೆಟ್ ಟಿ.ಎಚ್. ದ್ಯಾವನೂರ ಮಾತನಾಡಿ, ನಗರಸಭೆಗೆ ಅದಾಯದ ಮೂಲಗಳ ಕೊರತೆ ಇರುವದರಿಂದ ನಿರೀಕ್ಷಿತ ಅಭಿವೃದ್ಧಿಯಾಗುತ್ತಿಲ್ಲ.  ಪ್ರತಿವರ್ಷ ನೀರು, ವಿದ್ಯುತ್ ಹಾಗೂ ಸ್ವಚ್ಛತೆ ನಿರ್ವಹಣೆಗಾಗಿ 16 ಕೋಟಿ ಖರ್ಚಾಗುತ್ತಿದ್ದರೆ, ನಗರಸಭೆಗೆ ಗರಿಷ್ಠ 90 ಲಕ್ಷ ರೂ.ಗಳ ಆದಾಯ ಬರುತ್ತಿದೆ. ನಗರಸಭೆಗೆ ಶೇ.50ರಷ್ಟು ಆಸ್ತಿ ತೆರಿಗೆ ಹಾಗೂ ಶೇ. 93ರಷ್ಟು  ನೀರಿನ ಕರ ಬರಬೇಕಾಗಿದೆ ಎಂದು ಕಳೆದ ಸಾಲಿನ ಅಂಕಿ ಅಂಶಗಳನ್ನು ವಿವರಿಸಿದರು.

ಇದಕ್ಕೆ ಉತ್ತರವಾಗಿ ಸಮಾಜಸೇವಕರಾದ ಸತೀಶ ಹೂಲಿ ಮಾತನಾಡಿ, ಕಸ ಸಂಗ್ರಹಣೆಯ ಆದಾಯ ಇತರರಿಗೆ ಹೋಗುತ್ತಿದೆ. ನೀರು ಸರಿಯಾಗಿ ಪೂರೈಕೆ ಆಗದೆ ಮತ್ತು 24*7 ಯೋಜನೆ ಪೂರ್ಣಗೊಳ್ಳದೆ ಇರುವದರಿಂದ ಆದಾಯ ಕಡಿಮೆ ಆಗಿದೆ. 40 ಲಕ್ಷ ರೂ. ಭಿಕ್ಷುಕರ ಕರ ಮೀಸಲಿಟ್ಟರೂ ಭಿಕ್ಷಾಟನೆ ಕಡಿಮೆಯಾಗಿಲ್ಲ. 40 ಲಕ್ಷ ರೂ. ಗ್ರಂಥಾಲಯಕ್ಕೆ ಮೀಸಲಿಟ್ಟರೂ ಅದು ಬಳಕೆಯಾಗಿಲ್ಲ. ದೊಡ್ಡ ವಾಣಿಜ್ಯ ಮಳಿಗೆಗಳಿಂದ ತೆರಿಗೆ ವಸೂಲಿ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುತ್ತು ಬಿಳೆಯಲಿ ಮಾತನಾಡಿ, ನಗರಸಭೆಯ 450ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳ ಬಾಡಿಗೆ ದರವನ್ನು ಪರಿಷ್ಕರಣೆ ಮಾಡಿ ಬಾಡಿಗೆ ಹೆಚ್ಚಿಸಿದರೆ ಅದರಿಂದ ಬರುವ ಆದಾಯದಿಂದ ಅಭಿವೃದ್ಧಿ ಮಾಡಬಹುದು ಎಂದು ಹೇಳಿದರು.

ಅಶೋಕ ಕುಡತಿನ್ನಿ ಮಾತನಾಡಿ, ಅವಳಿ ನಗರ ಬೃಹತ್ತಾಗಿ ಬೆಳೆಯುತ್ತಿದ್ದರೂ ಅದಾಯದ ಕೊರತೆಯಿಂದ ಅಭಿವೃದ್ಧಿ ಕುಂಠಿತಗೊಂಡಿದೆ. ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಆನಂದ ಸಿಂಗಾಡಿ, ಮೋಹನ ಕಟ್ಟಿಮನಿ, ಬಾಬು ನದಾಫ್, ಡಾ. ಪವನ ಪಾಟೀಲ, ಡಾ. ತುಕಾರಾಮ ಸೂರಿ, ಶರಣಪ್ಪ ಗೊಳಗೊಳಕಿ, ಪ್ರಕಾಶ ಕಲ್ಮನಿ, ಮುನ್ನಾ ರೇಶ್ಮಿ, ಮುತ್ತು ಚವಡಣ್ಣವರ ಮುಂತಾದವರು ಸಲಹೆಗಳನ್ನು ನೀಡಿದರು.

ವೇದಿಕೆ ಮೇಲೆ ಪೌರಾಯುಕ್ತರಾದ ಮಹೇಶ ಪೋತದಾರ ಉಪಸ್ಥಿತರಿದ್ದರು. ಕಚೇರಿಯ ವ್ಯವಸ್ಥಾಪಕ ಪರಶುರಾಮ ಶೇರಖಾನೆ, ಎಸ್.ವೈ. ಸಂಕನಗೌಡ್ರ, ಪ್ರಲ್ಹಾದ ಕಮ್ಯೂನಿಅಂತೇರ, ಬಸವರಾಜ ಕೋಳೂರು, ಎಂ.ಎಂ. ಮಕಾನದಾರ, ಎಸ್.ಎನ್. ದಳವಾಯಿ, ಎಸ್.ಎಂ. ಗುಡಿ, ಎಂ.ಆರ್. ಪಾಟೀಲ, ಜಗದೀಶ ಕೋನರೆಡ್ಡಿ ಮುಂತಾದವರು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here