ಯುವರಾಜ್ ಕುಮಾರ್ ನಟನೆಯ ಎರಡನೇ ಚಿತ್ರ ‘ಎಕ್ಕ’ ಸಿನಿಮಾಗೆ ಅದ್ದೂರಿ ಚಾಲನೆ ಸಿಕ್ಕಿದೆ. ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ‘ಎಕ್ಕ’ ಚಿತ್ರದ ಮುಹೂರ್ತ ನೆರವೇರಿದ್ದು, ಕ್ಲಾಪ್ ಮಾಡುವ ಮೂಲಕ ಶೈಲಾ ವಿಜಯ್ ಕಿರಂಗದೂರ್ ಚಿತ್ರಕ್ಕೆ ಚಾಲನೆ ನೀಡಿದರು. ಚಿತ್ರದ ಮುಹೂರ್ತದ ದಿನವೇ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ ಚಿತ್ರತಡ.
ಚಿತ್ರದ ಮುಹೂರ್ತ ಸಮಾರಂಭಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಬಂದು ಶುಭ ಹಾರೈಸಿದ್ದಾರೆ. ಚಿತ್ರದ ಮೊದಲ ಶಾಟ್ ಅನ್ನು ಡಾಲಿ ಧನಂಜಯ್ ನಿರ್ದೇಶಿಸಿದ್ದು, ನಿರ್ಮಾಪಕ ಕಾರ್ತಿಕ್ ಗೌಡ ಅವರ ತಾಯಿ ಶ್ರೀಮತಿ ವಿಜಯಲಕ್ಷ್ಮೀ ರಾಮಕೃಷ್ಣ ಕ್ಯಾಮೆರಾ ಬಟನ್ ಆನ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.
ಮುಂದಿನ ವರ್ಷ ಜೂನ್ 6ಕ್ಕೆ ಅದ್ಧೂರಿಯಾಗಿ ಎಕ್ಕ ಸಿನಿಮಾ ರಿಲೀಸ್ ಆಗಲಿದೆ. ಅಪ್ಪು ಕನಸಿನಂತೆ ಪಿಅರ್ ಕೆ ಪ್ರೊಡಕ್ಷನ್‌ನಲ್ಲಿ ಎಕ್ಕ ಸಿನಿಮಾ ಮೂಡಿ ಬರುತ್ತಿದೆ. ಎಕ್ಕ ಚಿತ್ರಕ್ಕೆ ಪಿಅರ್ ಕೆ ಜೊತೆ ಜಯಣ್ಣ ಫಿಲಂಸ್ ಹಾಗೂ ಕೆಅರ್ ಜಿ ಸ್ಟೂಡಿಯೋ ಕೈ ಜೋಡಿಸಿದೆ. ಕಾಶ್ಮೀರ, ಬೆಂಗಳೂರು, ಮೈಸೂರು, ದೆಹಲಿ, ಕೋಲ್ಕತ್ತಾ, ಮುಂಬೈ ಸೇರಿದಂತೆ ಹಲವಾರು ಸ್ಥಳಗಳಲ್ಲಿ ‘ಎಕ್ಕ’ ಚಿತ್ರದ ಚಿತ್ರೀಕರಣ ನಡೆಯುವುದಾಗಿ ತಂಡ ತಿಳಿಸಿದೆ.
ಈ ಚಿತ್ರದ ನಿರ್ದೇಶಕ ರೋಹಿತ್ ಪದಕಿ ಮಾತನಾಡಿ, ‘ಎಕ್ಕ’ ಒಂದು ಮೆಗಾ ಚಿತ್ರವಾಗಿದ್ದು, ಇದರ ಜವಾಬ್ದಾರಿ ಹೊತ್ತಿರುವ ಹೆಮ್ಮೆ ನನಗಿದೆ. ಚಿತ್ರದ ಎಲ್ಲ ನಿರ್ಮಾಪಕರು, ಕನ್ನಡ ಜನರು, ಯುವ ರಾಜ್ ಕುಮಾರ್ ಮತ್ತು ಅವರ ಅಭಿಮಾನಿಗಳ ಎಲ್ಲರ ನಂಬಿಕೆಯನ್ನು ಈ ಚಿತ್ರ ಉಳಿಸಲಿದೆ, ಜನರ ಮೇಲೆ ಆಳವಾದ ಭಾವನಾತ್ಮಕ ಪ್ರಭಾವ ಬೀರಲಿದೆ ಎಂದಿದ್ದಾರೆ.
ನಟ ಯುವ ರಾಜ್ ಕುಮಾರ್ ಮಾತನಾಡಿ, ತಾಯಿ ಆಶಿರ್ವಾದದೊಂದಿಗೆ, ಅಪ್ಪು ಚಿಕ್ಕಪ್ಪನ ಆಶಿರ್ವಾದದೊಂದಿಗೆ ಇವತ್ತು ‘ಎಕ್ಕ’ ಚಿತ್ರವನ್ನು ಆರಂಭಿಸಿದ್ದೇವೆ. ಮೂರು ಹೆಸರಾಂತ ನಿರ್ಮಾಣ ಸಂಸ್ಥೆಗಳೊಡನೆ, ರೋಹಿತ್ ಪದಕಿ ಅಂತಹ ದೊಡ್ಡ ನಿರ್ದೇಶಕರೊಡನೆ ಕೆಲಸ ಮಾಡುತ್ತಿರುವುದು ನನಗೆ ತುಂಬಾ ಖುಷಿ ಇದೆ ಎಂದು ತಿಳಿಸಿದರು.
ಚಿತ್ರದ ನಾಯಕಿ ಸಂಪದಾ ಮಾತನಾಡಿ, ‘ಎಕ್ಕ’ ಚಿತ್ರದ ಆರಂಭ ಬಹಳ ಮಂಗಳಕರವಾಗಿ ನೆರವೇರಿರುವುದು ನನಗೆ ತುಂಬ ಸಂತೋಷವನ್ನುಂಟು ಮಾಡಿದೆ. ಚಿತ್ರೀಕರಣವನ್ನು ನಾನು ಕಾತುರವಾಗಿ ಎದುರು ನೋಡುತ್ತಿದೇನೆ ಎಂದರು.
ರೋಹಿತ್ ಪದಕಿ ನಿರ್ದೇಶನದ ‘ಎಕ್ಕ’ ಒಬ್ಬ ಯುವಕನ ಕಥೆಯನ್ನು ಹೇಳುತ್ತದೆ. ಒಬ್ಬ ಮನುಷ್ಯನು ಭೂಗತ ಲೋಕಕ್ಕೆ ತುತ್ತಾದಾಗ, ಆತನಿಗೆ ಆಗುವ ಅನುಭವಗಳನ್ನು ಹೇಳುವ ಕಥೆಯೇ ಎಕ್ಕ ಸಿನಿಮಾ.
ಇದೇ ತಿಂಗಳ ನಮ್ಮ ಚಿತ್ರದ ಶೂಟಿಂಗ್ ಶುರು ಆಗುತ್ತದೆ ಅನ್ನೋ ಮಾಹಿತಿಯನ್ನ ಸಿನಿಮಾ ತಂಡವೇ ತಿಳಿಸಿದೆ. ನವೆಂಬರ್-1 ರಂದು ಈ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದೆ. ಈ ಚಿತ್ರಕ್ಕಾಗಿ ಯುವರಾಜ್‌ಕುಮಾರ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ.