ಹಾಸನ: ಹೋರಾಟ ಎನ್ನುವುದನ್ನು ರಕ್ತಗತವಾಗಿ ಮೈಗೂಡಿಸಿಕೊಂಡಿದ್ದೇನೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾನು ಸೋತು ಒಂದು ವಾರ ಆಗಿದೆ. ನೀವು ಎದೆಗುಂದಬಾರದು ಎಂದು ಅನೇಕರು ಹೇಳಿದ್ದಾರೆ. ನನಗಿನ್ನು 36 ವರ್ಷ. ನನ್ನ ಮುಂದೆ ಇರುವುದು ಒಂದೇ ಸವಾಲು. ಜನತಾದಳ ಪಕ್ಷವನ್ನು ದಡ ಮುಟ್ಟಿಸಬೇಕು. ನಾನು ಶಾಸಕನಾಗಬೇಕು ಎನ್ನುವುದು ನನ್ನ ಮುಂದೆ ಇರುವ ಪ್ರಶ್ನೆ ಅಲ್ಲ.
ಪ್ರಾದೇಶಿಕ ಪಕ್ಷ ಉಳಿಯಬೇಕಿದೆ. ಕನ್ನಡಿಗರ ಅಸ್ಮಿತೆಗಾಗಿ ಈ ಪಕ್ಷ ಉಳಿಯಬೇಕಿದೆ. ಆ ಹಿನ್ನೆಲೆಯಲ್ಲಿ ಹೋರಾಟ ಮಾಡುತ್ತೇನೆ. ಕೊನೆ ಉಸಿರು ಇರುವವರೆಗೂ ಹೋರಾಡುತ್ತೇನೆ. ಮಾತನಾಡಲು ವೇದಿಕೆಗಳು ಮುಂದಿನ ದಿನಗಳಲ್ಲಿ ಸಜ್ಜಾಗುತ್ತದೆ. ಹೋರಾಟ ಎನ್ನುವುದನ್ನು ರಕ್ತಗತವಾಗಿ ಮೈಗೂಡಿಸಿಕೊಂಡಿದ್ದೇನೆ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಒಬ್ಬ ಯುವಕನಾಗಿ ನಿಖಿಲ್ ಕುಮಾರಸ್ವಾಮಿ ನಿಮ್ಮ ಜೊತೆಯಲ್ಲಿ ಪ್ರಾಮಾಣಿಕವಾಗಿ ಇರುತ್ತಾನೆ ಎಂದು ಭರವಸೆ ನೀಡಿದರು.