ವಿಜಯಸಾಕ್ಷಿ ಸುದ್ದಿ, ಗದಗ: ನಾವಿಂದು ಸಾವಯವ ಕೃಷಿ ಪದ್ಧತಿಗೆ ಮಹತ್ವ ನೀಡದಿದ್ದರೆ ಬರಲಿರುವ ದಿನಗಳಲ್ಲಿ ದೊಡ್ಡ ಸಮಸ್ಯೆ ಎದುರಿಸುವ ಸ್ಥಿತಿ ಬರಬಹುದು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೆಶಕ ಹಾಗೂ ಸಮೇತಿ (ಉತ್ತರ)ಯ ನಿರ್ದೆಶಕ ಡಾ. ಬಿ.ಡಿ. ಬಿರಾದಾರ ಹೇಳಿದರು.
ಅವರು ಗದುಗಿನ ಕೃಷಿ ಸಂಶೋಧನಾ ಕೇಂದ್ರದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ, ಹೈದ್ರಾಬಾದ್‌ನ ಮ್ಯಾನೇಜ್, ಸಮೇತಿ (ಉತ್ತರ) ಕೃಷಿ ಇಲಾಖೆಯ ಸಹಯೋಗದಲ್ಲಿ ಜರುಗಿದ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿದ ಶಿಬಿರಾರ್ಥಿಗಳಿಗೆ, ದೇಸೀ ತರಬೇತಿ (ಡಿಪ್ಲೋಮಾ) ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಅವೈಜ್ಞಾನಿಕ ಕೃಷಿ ಪದ್ಧತಿಯಿಂದಾಗಿ ಇಳುವರಿ ಇಳಿತ, ಭೂಮಿ ಫಲವತ್ತೆತೆಗೆ ಹಾನಿಯಾಗುವದು. ಆದ್ದರಿಂದ ಸಾವಯವ ಗೊಬ್ಬರವನ್ನು ಮೊದಲು ಬಳಕೆ ಮಾಡಿ ನಂತರ ಅಗತ್ಯತೆಯನ್ನು ಅವಲೋಕಿಸಿ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು. ಭೂಮಿ ತನ್ನ ಹದವನ್ನು ಕಳೆದುಕೊಳ್ಳದಂತೆ ಮುಂಜಾಗ್ರತೆ ವಹಿಸುವದು ಅಗತ್ಯ ಎಂದರು.
ಅಧಿಕ ಇಳುವರಿಗೆಗಾಗಿ ಸುಧಾರಿತ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಸಂಶೋಧನೆಯ ಫಲದ ಫಲಿತಾಂಶವನ್ನು ಕ್ರೋಢೀಕರಿಸಿರುವ ಸುಧಾರಿತ ಬೇಸಾಯಿ ಪದ್ಧತಿ ಅನುಸರಿಸಿ. ಹೊಸ ತಂತ್ರಜ್ಞಾನ, ಬೀಜೋಪಚಾರದಿಂದ ಅಧಿಕ ಇಳುವರಿ ಪಡೆಯಬಹುದು ಎಂಬುದನ್ನು ಇಲ್ಲಿ ತರಬೇತಿ ಹೊಂದಿದ ನೀವು ರೈತರಿಗೆ ಮನವರಿಕೆ ಮಾಡಬೇಕು ಎಂದರು.
ಈ ರೀತಿಯ ತರಬೇತಿಗಳು ಪರಿಣಾಮಕಾರಿ ಫಲಿತಾಂಶ ನೀಡುತ್ತಿವೆ. ರೈತರಿಗೆ ಕೃಷಿ ವಿಜ್ಞಾನದ ಮಾಹಿತಿ ತಲುಪುವದು ಅಗತ್ಯವಾಗಿದ್ದು, ರೈತರು, ಕೃಷಿ ಇಲಾಖೆ, ಕೃಷಿ ವಿ.ವಿ ನಡುವಿನ ಕೊಂಡಿಯಾಗಿರುವ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಕೃಷಿ ವಿಶ್ವವಿದ್ಯಾಲಯ ನಿಮ್ಮನ್ನು ಅವಲಂಬಿಸಿದೆ. ನಿಮ್ಮ ಮೂಲಕ ರೈತರ ಏಳ್ಗೆ ಆಗಬೇಕೆಂಬುದು ನಮ್ಮ ಸದಾಶಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಗದಗ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೆಶಕರಾದ ಜಿ.ಎಚ್. ತಾರಾಮಣಿ, ರೈತರೊಂದಿಗೆ ನೇರ ಸಂಪರ್ಕಕ್ಕೆ ಬರುವ ಕೃಷಿ ಪರಿಕರ ವಿತರಕರಾದ ನೀವು ಇಲ್ಲಿ ಪಡೆದುಕೊಂಡ ತರಬೇತಿಯನ್ನು ಸದುಪಯೋಗ ಮಾಡಿಕೊಳ್ಳಿ. ರೈತರಿಗೆ ಮಾರ್ಗದರ್ಶನ, ಜಾಗೃತಿ ಮಾಡಿ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸಿ, ನೀವೂ ಮುನ್ನಡೆ ಸಾಧಿಸಿ. ಆದರೆ ಕೃಷಿ ಪರಿಕರ, ರಾಸಾಯನಿಕ ಮಾರಾಟ ಹೆಚ್ಚಿಸಿ ಲಾಭ ಪಡೆಯಲು ರೈತರಿಗೆ ಮೋಸ ಮಾಡಬೇಡಿ. ಸತ್ಯ, ನಿಷ್ಠೆ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿ ಎಂದರು.
ತರಬೇತಿ ಪಡೆದ ಕೃಷಿ ಪರಿಕರ ವಿತರಕರಿಗೆ ಪ್ರಮಾಣಪತ್ರ ನೀಡಿ ರೈತರ ಏಳ್ಗೆಗಾಗಿ ಶ್ರಮಿಸುವ ಪ್ರಮಾಣ ವಚನ ಬೋಧಿಸಲಾಯಿತು. ತರಬೇತಿ ಪಡೆದುಕೊಂಡವರು ತಮ್ಮ ಅಭಿಪ್ರಾಯ ಹೇಳಿದರು. ಕೃಷಿ ವಿಜ್ಞಾನಿ ಎಸ್.ಎ. ಸೂಡಿಶೆಟ್ಟರ ಸ್ವಾಗತಿಸಿ ನಿರೂಪಿಸಿದರು. ಬೆಳವಟಗಿಯ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಕೃಷಿ ವಿಸ್ತರಣಾ ಮುಂದಾಳು ಡಾ. ಸಿ.ಎಂ. ರಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗದಗ ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ. ಎಸ್.ಎಲ್. ಪಾಟೀಲ ಉಪಸ್ಥಿತರಿದ್ದರು. ಕೃಷಿ ವಿಜ್ಞಾನಿ ಎಸ್.ಕೆ. ಮುದ್ಲಾಪೂರ ವಂದಿಸಿದರು.