ಹಾಸನ:- ಪೊಲೀಸ್ ಜೀಪ್ ಪಲ್ಟಿ ಹೊಡೆದು IPS ಅಧಿಕಾರಿ ದುರ್ಮರಣ ಹೊಂದಿರುವ ಘಟನೆ ಹಾಸನದಲ್ಲಿ ಜರುಗಿದೆ. ಟಯರ್ ಸ್ಫೋಟಗೊಂಡ ಪರಿಣಾಮ ಈ ಅವಘಡ ಸಂಭವಿಸಿದೆ.
ಹರ್ಷವರ್ಧನ್ ಮೃತ IPS ಅಧಿಕಾರಿ ಎಂದು ಗುರುತಿಸಲಾಗಿದೆ. ಮೈಸೂರಿನ ಕೆಪಿಎನಿಂದ ಹಾಸನ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಬರುತ್ತಿದ್ದ ವೇಳೆ ಕಿತ್ತಾನೆ ಗಡಿ ಭಾಗದಲ್ಲಿ ಈ ಅಪಘಾತ ಸಂಭವಿಸಿದೆ.
ಹಾಸನ ಜಿಲ್ಲೆಗೆ ನಿಯೋಜನೆಗೊಂಡಿದ್ದ ಹರ್ಷವರ್ಧನ್ ಅವರು, ಇಂದು ಸಂಜೆ ವರದಿ ಮಾಡಿಕೊಳ್ಳಲು ಹೊಳೆನರಸೀಪುರ ಕಡೆಯಿಂದ ಜೀಪ್‌ನಲ್ಲಿ ಹಾಸನ ನಗರಕ್ಕೆ ಬರುತ್ತಿದ್ದರು. ಇನ್ನೇನು ಕೆಲವೇ ನಿಮಿಷಗಳಲ್ಲಿ ಹಾಸನ ತಲುಪಬೇಕು ಎನ್ನುವಷ್ಟರಲ್ಲಿ ಕಿತ್ತಾನೆಗಡಿ ಬಳಿ ಜೀಪ್‌ನ ಟಯರ್ ಸ್ಫೋಟಗೊಂಡಿದೆ.
ಈ ವೇಳೆ ವೇಗವಾಗಿ ಚಲಿಸುತ್ತಿದ್ದ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಜೀಪ್ ನಜ್ಜುಗುಜ್ದಾಗಿದೆ. ಸ್ಥಳೀಯರು ಕೂಡಲೇ ಅಧಿಕಾರಿ ಮತ್ತು ಚಾಲಕನನ್ನು 108 ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.