ನ್ಯಾಯಾಲಯದಲ್ಲಿ ಪ್ರಬುದ್ಧವಾಗಿ ಪ್ರಕರಣಗಳನ್ನು ಮಂಡಿಸಿ ಉತ್ತಮ ವಕೀಲರಾಗಬೇಕು: ಮೋಹನ ಭಜಂತ್ರಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಸುತ್ತ ದಿನಮಾನಗಳಲ್ಲಿ ಹೊಸ ಹೊಸ ಕಾನೂನುಗಳು ಜಾರಿಯಾಗಿದ್ದು, ಅವುಗಳನ್ನು ಆಳವಾಗಿ ಅಭ್ಯಾಸ ಮಾಡುವುದರ ಮೂಲಕ ನ್ಯಾಯಾಲಯದಲ್ಲಿ ಪ್ರಬುದ್ಧವಾಗಿ ಪ್ರಕರಣಗಳನ್ನು ಮಂಡಿಸಿ, ಉತ್ತಮ ವಕೀಲರಾಗುವುದು ಇಂದಿನ ಯುವ ವಕೀಲರ ಆದ್ಯತೆಯಾಗಬೇಕಿದೆ ಎಂದು ವಕೀಲ ಹಾಗೂ ಕೆಎಸ್‌ಎಲ್‌ಯು ಸಿಂಡಿಕೇಟ್ ಸದಸ್ಯ ಮೋಹನ ಭಜಂತ್ರಿ ಹೇಳಿದರು.

Advertisement

ನಗರದ ಕೆ.ಎಲ್.ಇ ಸಂಸ್ಥೆಯ ಎಸ್.ಎ ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಸೋಮವಾರ ಜರುಗಿದ ಸಾಂಘಿಕ ಚಟುವಟಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವ ವಕೀಲರು ನಿರಂತರ ಅಧ್ಯಯನದ ಕೊರತೆಯಿಂದ ನ್ಯಾಯಾಲಯದಲ್ಲಿ ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ಕಾನೂನು ಕಾಲೇಜುಗಳಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳಲ್ಲಿಯೂ ಹೆಚ್ಚು ಆಸಕ್ತಿ ವಹಿಸಿ, ಮಾನಸಿಕವಾಗಿ ಸದೃಢರಾಗಲು ಮುಂದಾಗಬೇಕು. ಕಾನೂನು ಒಂದು ವಿಜ್ಞಾನವಾಗಿದ್ದು, ಅದನ್ನು ನಿರಂತರವಾಗಿ ಶೋಧನೆ ಮಾಡುವ ಕಾರ್ಯಕ್ಕೆ ಮುಂದಾಗಬೇಕಾದರೆ ವಿದ್ಯಾರ್ಥಿಗಳು ಗ್ರಂಥಾಲಯ ಹಾಗೂ ತಂತ್ರಜ್ಞಾನ ಬಳಕೆ ಮಾಡಿಕೊಂಡು ಹೊಸ ತೀರ್ಪುಗಳನ್ನು ನೋಡಲೇಬೇಕು. ಅಂದಾಗ ಮಾತ್ರ ಒಂದು ಪ್ರಕರಣಕ್ಕೆ ಯಾವ ರೀತಿಯಲ್ಲಿ ತಯಾರಿ ನಡೆಸಬೇಕು ಎಂಬುವುದನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಗದಗದಲ್ಲಿರುವ ಎಸ್.ಎ ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಎಷ್ಟೋ ವಕೀಲರು ಇಂದು ಸಿವಿಲ್ ಪ್ರಕರಣಗಳಲ್ಲಿ ಕಿಂಗ್ ಎಂದು ಎನ್ನಿಸಿಕೊಂಡಿದ್ದಾರೆ. ಅಲ್ಲದೆ, ಗ್ರಾಹಕರ ಸಂರಕ್ಷಣಾ ಕಾಯ್ದೆಯಲ್ಲಿ ನೊಂದ ಗ್ರಾಹಕರಿಗೆ ಪರಿಹಾರ ಒದಗಿಸುವುದರ ಮೂಲಕ ಕಾಲೇಜಿನ ಮತ್ತು ಸಂಸ್ಥೆಯ ಹೆಸರನ್ನು ಬೆಳಗುತ್ತಿದ್ದಾರೆ. ಅದರಂತೆ ತಾವು ಕೂಡ ಕ್ರಿಮಿನಲ್, ಸಿವಿಲ್, ಮಾಹಿತಿ ಹಕ್ಕು ಅಡಿಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸುವುದರ ಮೂಲಕ ಉತ್ತಮ ಸಮಾಜಕ್ಕೆ ಕೊಡುಗೆಯನ್ನು ನೀಡಲು ಮುಂದಾಗಬೇಕು ಎಂದರು.

ಇತ್ತೀಚಿಗೆ ಪಿಎಚ್‌ಡಿ ಪಡೆದ ಉಪನ್ಯಾಸಕ ಡಾ. ಶ್ರೀನಿವಾಸ ಪಾಲ್ಕೊಂಡ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ವಿದ್ಯಾರ್ಥಿ ಪರಿಷತ್ ಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾಲೇಜಿನ ಸ್ಥಾನಿಕ ಮಂಡಳಿ ಚೇರಮನ್ ಎಸ್.ಎ. ಮಾನ್ವಿ, ಸದಸ್ಯ ಎಸ್.ಎಫ್. ಹಾದಿಮನಿ, ಉಪನ್ಯಾಸಕರಾದ ಡಾ. ಜ್ಯೋತಿ ಸಿ.ವಿ, ಶರತ್ ದರಬಾರೆ, ಬಿ.ಎ. ಹಿರೇಮಠ, ಡಾ. ಸಿ.ವಿ. ರಣಗಟ್ಟಿಮಠ ಸೇರಿದಂತೆ ಇತರರಿದ್ದರು. ಉಪನ್ಯಾಸಕ ಡಾ. ವಿಜಯ ಮುರದಂಡೆ ಸ್ವಾಗತಿಸಿದರು. ವಿದ್ಯಾರ್ಥಿನಿ ಚೈತ್ರಾ ಗೌಡ್ರ ಪ್ರಾರ್ಥಿಸಿದರು. ಸುಶ್ಮಾ ಗೊಬ್ಬರಗುಂಪಿ ನಿರೂಪಿಸಿದರು. ಸಂತೋಷ ಭದ್ರಾಪೂರ ವಂದಿಸಿದರು.


Spread the love

LEAVE A REPLY

Please enter your comment!
Please enter your name here