ಭಾರತೀಯ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಈರುಳ್ಳಿ ಇಲ್ಲದೇ ಅಡುಗೆಯೇ ಆಗುವುದಿಲ್ಲ. ಈರುಳ್ಳಿ, ಭಾರತೀಯ ಮನೆಗಳಲ್ಲಿ ಹೆಚ್ಚಾಗಿ ಬಳಸುವ ತರಕಾರಿಯಾಗಿದೆ. ಆದರೆ ಈರುಳ್ಳಿಯನ್ನು ಸರಿಯಾಗಿ ಆಯ್ದುಕೊಳ್ಳಲು ತಿಳಿದಿರಬೇಕು. ಈರುಳ್ಳಿ ಸರಿಯಾಗಿಲ್ಲದಿದ್ದರೆ, ಅಡುಗೆ ರುಚಿಯಾಗಿ ಸರಿಯಾಗಿ ಬರದು.
ಸಾಮಾನ್ಯವಾಗಿ ಈರುಳ್ಳಿಯಲ್ಲಿ ಅನೇಕ ಆರೋಗ್ಯ ಪ್ರಯೋಜನಗಳಿದೆ. ಮಾನವನ ಜೀರ್ಣಾಂಗ ವ್ಯವಸ್ಥೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುವ ಶಕ್ತಿ ಈರುಳ್ಳಿಗೆ ಇದೆ. ನಮ್ಮ ದೇಹದಲ್ಲಿನ ಕೆಲವು ಅಲರ್ಜಿ ಸಮಸ್ಯೆಗಳು ಕಣ್ಣಿನ ತುರಿಕೆ, ಗಂಟಲು ತುರಿಕೆ ಮತ್ತು ನೆಗಡಿ ಮುಂತಾದ ಅನೇಕ ಸಮಸ್ಯೆಗಳಿಗೆ ಈರುಳ್ಳಿ ಪರಿಹಾರವಾಗಿದೆ.
ಆದರೆ ಕೆಲವು ಈರುಳ್ಳಿ ಸಿಪ್ಪೆ ತೆಗೆಯುವಾಗ ಅದರ ಮೇಲೆ ಕಪ್ಪು ಅಚ್ಚನ್ನು ನೋಡಿದ್ದೀರಾ? ಈಗ ಬರುತ್ತಿರುವ ಈರುಳ್ಳಿಯಲ್ಲಿ ಕಪ್ಪು ಅಚ್ಚು ಹೆಚ್ಚು ಕಾಣುತ್ತಿದೆ. ಎಷ್ಟೋ ಜನಕ್ಕೆ ಈ ರೀತಿ ಇರುವ ಈರುಳ್ಳಿ ತಿನ್ನಬಹುದೇ? ಇಲ್ಲವೇ? ಕಪ್ಪು ಅಚ್ಚು ದೇಹಕ್ಕೆ ಹಾನಿ ಮಾಡಬಹುದೇ ಎಂಬ ಗೊಂದಲವಿದೆ. ನಿಮ್ಮ ಗೊಂದಲದ ಬಗ್ಗೆ ತಜ್ಞರು ಕೆಲವು ಮಾಹಿತಿಗಳನ್ನು ನೀಡಿದ್ದಾರೆ.
ಈರುಳ್ಳಿ ಸಿಪ್ಪೆ ಸುಲಿಯುವಾಗ ಕಪ್ಪು ಚುಕ್ಕೆ ಇದ್ದರೆ ಅಂತಹ ಈರುಳ್ಳಿ ತಿಂದರೆ ಮ್ಯೂಕಾರ್ಮೈಕೋಸಿಸ್ ಬರಬಹುದು ಎಂಬ ಭಯ ಅನೇಕ ಮಂದಿ ಹೊಂದಿದ್ದಾರೆ. ಈರುಳ್ಳಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಕಪ್ಪು ಅಚ್ಚನ್ನು ಆಸ್ಪರ್ಜಿಲಸ್ ನೈಗರ್ ಎಂದು ಕರೆಯಲಾಗುತ್ತದೆ. ಈ ರೀತಿಯ ಶಿಲೀಂಧ್ರವು ಮಣ್ಣಿನಲ್ಲಿ ಕಂಡುಬರುತ್ತದೆ. ಈರುಳ್ಳಿಗೂ ಅದೇ ಹೋಗುತ್ತದೆ. ಈ ಕಪ್ಪು ಅಚ್ಚು ಮ್ಯೂಕೋರ್ಮೈಕೋಸಿಸ್ ಅಲ್ಲ. ಆದರೆ ಈ ಕಪ್ಪು ಅಚ್ಚು ಒಂದು ರೀತಿಯ ವಿಷವನ್ನು ಹೊರಸೂಸುತ್ತದೆ ಎಂದು ಸಂಶೋಧನೆಯೊಂದು ಬಹಿರಂಗ ಪಡಿಸಿದೆ.
ಜೀವಕ್ಕೆ ಅಪಾಯಕಾರಿಯಲ್ಲದಿದ್ದರೂ, ಇದು ಅಲರ್ಜಿಯನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲೂ ಈಗಾಗಲೇ ಅಲರ್ಜಿ ಇರುವವರು ಈ ಕಪ್ಪು ಚುಕ್ಕೆ ಇರುವ ಈರುಳ್ಳಿಯನ್ನು ಸೇವಿಸದಿರುವುದು ಉತ್ತಮ. ಜೊತೆಗೆ ಅಸ್ತಮಾ ಇರುವವರು ಈ ತರಹದ ಈರುಳ್ಳಿ ತಿಂದರೆ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದೂ ಹೇಳಲಾಗುತ್ತದೆ. ಆದ್ದರಿಂದ ಕಪ್ಪು ಚುಕ್ಕೆ ಇರುವ ಪದರವನ್ನು ಹೊರತೆಗೆದು ನಂತರ ಬೇಕಾದರೆ ಈರುಳ್ಳಿ ಬಳಸಬಹುದಾಗಿದೆ.