ವಿಜಯಸಾಕ್ಷಿ ಸುದ್ದಿ, ಗದಗ: ಆರೋಗ್ಯಕರ ಮತ್ತು ಸಾವಯವ ಖಾದ್ಯಗಳಿಂದ ಮನೆಯಲ್ಲಿಯೇ ಆಹಾರವನ್ನು ತಯಾರಿಸಿ ಬಡಿಸುತ್ತಿದ್ದರಿಂದ ಸಾಂಪ್ರದಾಯಿಕ ಆಹಾರದ ಪರಿಮಳ ಮುಗಿಲು ಮುಟ್ಟಿತ್ತು. ರಾಗಿ, ನವಣೆಯಂತಹ ಸಾವಯವ ಆಹಾರದಿಂದ ಆಗುವ ಪ್ರಯೋಜನಗಳು ಮತ್ತು ಜಂಕ್ ಫುಡ್‌ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಈ ಕಾರ್ಯಕ್ರಮ ಪ್ರಮುಖವಾಗಿದೆ ಎಂದು ನಂದಾ ಬಾಳಿಹಳ್ಳಿಮಠ ಅಭಿಪ್ರಾಯಪಟ್ಟರು.
ಇಲ್ಲಿನ ಕೆಎಲ್‌ಇ ಸೊಸೈಟಿಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯ ಮತ್ತು ಗೃಹ ವಿಜ್ಞಾನ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಕರ್ನಾಟಕದ ಸಾಂಪ್ರದಾಯಿಕ ತಿನಿಸುಗಳ ಕುರಿತ ಅಂತರ ಕಾಲೇಜು ಆಹಾರ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಾಂಶುಪಾಲ ಡಾ. ಎ.ಕೆ. ಮಠ ಮಾತನಾಡಿ, ಸಾವಯವ ಪದ್ಧತಿಯು ಆರೋಗ್ಯಕರ ಆಹಾರವನ್ನು ನೀಡುವ ಮೂಲಕ ಗ್ರಾಹಕರಿಗೆ ಆರೋಗ್ಯಕರ ಜೀವನವನ್ನು ಒದಗಿಸುತ್ತದೆ. ನಿರಂತರ ವಿಷಕಾರಿ ಕೀಟನಾಶಕಗಳು, ಸಂಶ್ಲೇಷಿತ ರಸಗೊಬ್ಬರಗಳು ಅಥವಾ ತಳೀಯವಾಗಿ ಮಾರ್ಪಡಿಸಿದ ಜೀವಿಗಳನ್ನು ಉತ್ಪಾದನೆಯಲ್ಲಿ ಬಳಸಲಾಗುವುದಿಲ್ಲ ಮತ್ತು ಪ್ರತಿಜೀವಕಗಳು ಅಥವಾ ಬೆಳವಣಿಗೆಯ ಹಾರ್ಮೋನುಗಳನ್ನು ಜಾನುವಾರುಗಳಿಗೆ ನೀಡಲಾಗುವುದಿಲ್ಲ ಎಂದು ಈ ಪದ್ಧತಿಯು ಭರವಸೆ ಮೂಡಿಸಿದೆ ಎಂದರು.
ಫುಡ್ ಫೆಸ್ಟ್ ಮತ್ತು ಮಾರ್ಕೆಟಿಂಗ್ ಫೆಸ್ಟ್ನಲ್ಲಿ ಒಟ್ಟು ೨೬ ತಂಡಗಳು ಭಾಗವಹಿಸಿದ್ದವು. ವಾಣಿಜ್ಯ ವಿಭಾಗದ ಎಚ್‌ಒಡಿ ಪ್ರೊ. ಎಸ್.ಸಿ. ನಿಲುಗಲ್ ಎರಡೂ ಉತ್ಸವಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಪ್ರೇರಣೆ ಹಾಗೂ ಮಾರ್ಗದರ್ಶನ ನೀಡಿದರು. ವಿಜೇತರಿಗೆ ನಗದು ಬಹುಮಾನವನ್ನು ನೀಡಲಾಯಿತು. ಬಹುಮಾನಗಳನ್ನು ಸುವರ್ಣ ವಸ್ತು, ಪ್ರೇಮಾ ಹಂದಿಗೋಳ್, ಪುಷ್ಪ ಭಂಡಾರಿ ಮತ್ತು ಸುಶೀಲ ಕೋಟಿ ಪ್ರಾಯೋಜಿಸಿದ್ದರು.
ಉಪ ಪ್ರಾಂಶುಪಾಲರಾದ ಡಾ. ವೀಣಾ ಇ ಸಾಚಿದರ್ಭಿಕವಾಗಿ ಮಾತನಾಡಿದರು. ನಂತರ ನಡೆದ ಬಹುಮಾನ ವಿತರಣಾ ಸಮಾರಂಭ ಹಾಗೂ ಸನ್ಮಾನ ಸಮಾರಂಭವನ್ನು ಪ್ರೊ. ಹರ್ಷ ನಿಲುಗಲ್ ನಡೆಸಿಕೊಟ್ಟರು. ಗೃಹ ವಿಜ್ಞಾನ ವಿಭಾಗದ ಎಚ್‌ಒಡಿ ವೀಣಾ ತಿರ್ಲಾಪುರ ವಂದಿಸಿದರು.



