ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 2023-24ನೇ ಸಾಲಿನ ನಡೆದ ವಿವಿಧ 98 ಕಾಮಗಾರಿಗಳಲ್ಲಿ 44 ಕಾಮಗಾರಿಗಳ 1.15 ಕೋಟಿ ರೂಗಳನ್ನು ಆಕ್ಷೇಪಣೆಗೊಳಪಡಿಸಲಾಗಿದೆ.
ಈ ಕುರಿತು ಇಲ್ಲಿಯ ಅನ್ನದಾನೀಶ್ವರ ಸಮುದಾಯ ಭವನದಲ್ಲಿ ಕರೆಯಲಾಗಿದ್ದ ಮನರೆಗಾ ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆಯಲ್ಲಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಸಂತೋಷ ಪಾಟೀಲ ವಿವರಣೆ ನೀಡಿದರು.
ಲಕ್ಕುಂಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದ ವೈಯಕ್ತಿಕ ಕಾಮಗಾರಿಗಳ ಹೊಳಗಟ್ಟಿ, ದನದದೊಡ್ಡಿ ನಿರ್ಮಾಣ, ಸಮುದಾಯ ಕಾಮಗಾರಿಗಳಾದ ರಸ್ತೆ ದುರಸ್ಥಿ, ಸಿ.ಸಿ ರಸ್ತೆ, ಶಾಲಾ ಮೈದಾನ ಕಾಮಗಾರಿಗಳನ್ನು 5 ದಿನ ಪರಿಶೀಲನೆ ಮಾಡಲಾಗಿದೆ. ಒಟ್ಟು 44 ಪ್ರಕರಣಗಳಲ್ಲಿ ಚೆಕ್ ಮೆಜರಮೆಂಟ್, ಬಿಲ್ ವೋಚರ್ ಇಲ್ಲದೇ ಇರುವುದು, ಅಳತೆ ನಮೂದಿಸದೇ ಇರುವುದು, 2 ಕಡತ ನಿಡದೇ ಇರುವುದರಿಂದ 1,15,12,078 ರೂ.ಗಳನ್ನು ಆಕ್ಷೆಪಣೆಗೊಳಪಡಿಸಲಾಗಿದೆ. ದರಪಟ್ಟಿ, ತುಲಾನಾತ್ಮಕ ಪಟ್ಟಿ, ಸರಬರಾಜು ಆದೇಶವಿಲ್ಲದೇ(ಕೆ.ಟಿ.ಪಿ.ಪಿ) 37,4,184 ರೂ.ಗಳ 5 ಕಾಮಗಾರಿಗಳನ್ನು ಮಾಡಲಾಗಿದೆ.
ಖನಿಜ ಭೂಮಾಪನ ಇಲಾಖೆಗೆ 27 ಕಾಮಗಾರಿಗಳಿಗೆ 41199 ರೂ ರಾಜಧನ ಪಾವತಿಸಿಲ್ಲ. ಮನೆ ನಿರ್ಮಾಣ 18 ದಿನ ಅಧಿಕ ಕೂಲಿ, ಮತ್ತು ಹೊಳಗಟ್ಟಿ ಪ್ಲಾಸ್ಟರ ಮಾಡದೇ ಇರುವುದರಿಂದ ಈ 2 ಪ್ರಕರಣಗಳಲ್ಲಿ 13749 ರೂ.ಗಳನ್ನು ವಸೂಲಾತಿಗೆ ಹಾಕಲಾಗಿದೆ ಎಂದು ತಿಳಿಸಿದರು.62 ವೈಯಕ್ತಿಕ ಕಾಮಗಾರಿ, 36 ಸಮುದಾಯ ಕಾಮಗಾರಿ ಸೇರಿ ಒಟ್ಟು 98 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಒಟ್ಟು 37911 ಮಾನವ ದಿನಗಳು ಸೃಜನೆಯಾಗಿದೆ. ಒಟ್ಟು ಕೂಲಿ ಮೊತ್ತ 1,13,09,464 ಸಾಮಗ್ರಿ ಮೊತ್ತ 18,56,761 ರೂ. ಸೇರಿ 13166225 ರೂಗಳನ್ನು ಖರ್ಚು ಮಾಡಲಾಗಿದೆ ಎಂದು ಅವರು ವಿವರಿಸಿದರು.
15ನೇ ಹಣಕಾಸು ಯೋಜನೆಯ ಕುರಿತು ಗ್ರಾಮ ಸಂಪನ್ಮೂಲ ವ್ಯಕ್ತಿ ಎಂ.ಕೆ. ಹುಯಿಲಗೋಳ ವಿವರಣೆ ನೀಡುತ್ತಾ, ಆರಂಭದ ಮೊತ್ತ, ವರ್ಷದಲ್ಲಿ 2 ಸಲ ಜಮಾ ಆಗಿರುವ ಮೊತ್ತ, ಬ್ಯಾಂಕ್ ಬಡ್ಡಿ, ಮರಳಿ ಜಮಾ ಆದ ಜೆ.ಜೆ.ಎಂ ವಂತಿಗೆ ಸೇರಿ 17791315 ರೂ ಅನುದಾನದಲ್ಲಿ ಕುಡಿಯುವ ನೀರು, ನೈರ್ಮಲ್ಯ, ಬೀದಿ ದೀಪಗಳ ಕಾಮಗಾರಿ ಚಟುವಟಿಕೆಗೆ 6200941 ರೂ, ತೆರಿಗೆ 24784 ರೂ, ಸೇರಿದಂತೆ 6225745 ರೂ ಖರ್ಚು ಮಾಡಲಾಗಿದೆ ಎಂದು ವಿವರಿಸಿದರು.
ಇದರಲ್ಲಿ 18 ಕಾಮಗಾರಿಗಳಲ್ಲಿ 63476 ರೂ ಸರಕಾರಕ್ಕೆ ತೆರಿಗೆ ಭರಣ ಮಾಡಿಲ್ಲ. 37 ವೋಚರ್ಗಳಿಗೆ 1386772 ರೂ.ಗಳಿಗೆ ಕೆಟಿಪಿಪಿ ನಿಯಮ ಪಾಲನೆ ಮಾಡಿರುವುದಿಲ್ಲ. ಫಕ್ಕೀರಸ್ವಾಮಿ ದೇವಸ್ಥಾನದ ಮುಂದೆ ಸಮುದಾಯ ಭವನ ನಿರ್ಮಾಣಕ್ಕೆ 116290 ರೂ ಅನುದಾನದಲ್ಲಿ ಅಭಿವೃದ್ಧಿ ಮಾಡಲಾಗಿದ್ದು, ಸದರಿ ಯೋಜನೆಯಡಿ ಈ ದೇಗುಲಕ್ಕೆ ಅನುದಾನ ಉಪಯೋಗಿಸಲು ಅವಕಾಶವಿರುವುದಿಲ್ಲ. ಇದನ್ನು ಮೇಲಾಧಿಕಾರಿಗಳ ತಿರ್ಮಾನಕ್ಕೆ ಬಿಡಲಾಗಿದೆ ಎಂದು ವಿವರಿಸಿದರು.
ಶಿಕ್ಷಣ ಇಲಾಖೆಯ ಗದಗ ಶಹರ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪಿ.ಡಿ. ಮಂಗಳೂರು ನೊಡೆಲ್ ಅಧಿಕಾರಿಯಾಗಿ ಆಗಮಿಸಿದ್ದರು. ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಗ್ರಾ.ಪಂ ಸದಸ್ಯರು, ಪಿ.ಡಿ.ಒ ರಾಜಕುಮಾರ ಭಜಂತ್ರಿ, ೧೫ನೇ ಹಣಕಾಸು ಯೋಜನೆಯ ವ್ಯವಸ್ಥಾಪಕ ಎಂ. ಮರಿಬಸವ, ಸಂಪನ್ಮೂಲ ವ್ಯಕ್ತಿಗಳಾದ ವಸಂತ ಹಾದಿಮನಿ, ಮಲ್ಲಪ್ಪ ಜಿನಗಿ, ಮಂಜುನಾಥ ಹುಡೇದ, ಪವಿತ್ರಾ ಜಕ್ಕಲಿ ಇದ್ದರು. ಎಸ್.ಡಿ.ಎ ತುಕಾರಾಮ ಹುಲಗಣ್ಣವರ ನಿರೂಪಿಸಿ ವಂದಿಸಿದರು.
- ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಅಧಿಕಾರಿಗಳ ಹಾಗೂ ಮನರೆಗಾ ಯೋಜನೆಯ ಸಿಬ್ಬಂದಿಗಳು ಯೋಜನೆಯ ಕಾಮಗಾರಿಗಳನ್ನು ನಿಯಮಬಾಹಿರವಾಗಿ ಮಾಡದೇ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿ ವರ್ಗವು ಗ್ರಾ.ಪಂ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಕಾನೂನು ತಿಳುವಳಿಕೆ ನೀಡಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು. ಕಳೆದ ವರ್ಷ ನಡೆದ ಮನೇರೆಗಾ ಕಾಮಗಾರಿಗಳ ಆಕ್ಷೇಪಣೆ, ವಸೂಲಾತಿ ಸೇರಿದಂತೆ ಅದರ ವಿವರವನ್ನು ಸಭೆಯ ಗಮನಕ್ಕೆ ತಂದು ಪಾರದರ್ಶಕ ಆಡಳಿತ ನೀಡಲು ಅನುಕೂಲ ಕಲ್ಪಿಸಬೇಕು ಎಂದರು.