ಬೆಂಗಳೂರು:- ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಲೆ ಭಾರೀ ಏರಿಕೆ ಆಗಿರುವ ಹಿನ್ನೆಲೆ ರೈತರ ಮುಗದಲ್ಲಿ ಮಂದಹಾಸ ಮೂಡಿದೆ. ಆದ್ರೆ ಗ್ರಾಹಕ ಮಾತ್ರ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾನೆ.
ಇನ್ನೂ ಹೊರ ರಾಜ್ಯಗಳಿಂದ, ರಾಜ್ಯಕ್ಕೆ ಬರಬೇಕಿದ್ದ ಈರುಳ್ಳಿ, ಬೆಳ್ಳುಳ್ಳಿ ಆಮದು ಆಗದಿರುವುದೇ ದರ ಏರಿಕೆಗೆ ಕಾರಣ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.
ಈರುಳ್ಳಿ ಬೆಲೆ ನೂರರ ಗಡಿ ತಲುಪುವ ಸಾಧ್ಯತೆ ಇದೆ. ಈಗಾಗಲೇ ಎಪಿಎಂಸಿ ಮಾರುಕಟ್ಟೆಯಲ್ಲಿ ಸಾಧಾರಣ ಈರುಳ್ಳಿ ಕೆಜಿಗೆ 40 ರಿಂದ 50 ರೂಪಾಯಿಗೆ ಮಾರಾಟವಾಗುತ್ತಿದ್ದರೆ, ಇತ್ತ ಉತ್ತಮ ಗುಣಮಟ್ಟದ ಈರುಳ್ಳಿ ಕೆಜಿಗೆ 60 ರಿಂದ 70 ರೂಪಾಯಿಗೆ ಮಾರಾಟವಾಗುತ್ತದೆ. ಸಣ್ಣಪುಟ್ಟ ಮಾರುಕಟ್ಟೆಯಲ್ಲಿ, ರಸ್ತೆಬದಿಯಲ್ಲಿ ಸಾಮಾನ್ಯ ಈರುಳ್ಳಿ ಕೆಜಿಗೆ 50 ರಿಂದ 60 ರೂಪಾಯಿಗೆ ಮಾರಾಟವಾಗುತ್ತಿದೆ. ಉತ್ತಮ ಗುಣಮಟ್ಟದ ಈರುಳ್ಳಿ ಕೆಜಿಗೆ 70 ರಿಂದ 80 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಬೆಳ್ಳುಳ್ಳಿ ದರ ಈಗಾಗಲೇ ಅರ್ಧಶತಕ ಬಾರಿಸಿ ಮುನ್ನುಗ್ಗುತ್ತಿದೆ. ಎಪಿಎಂಸಿಯಲ್ಲಿ ಸಾಮಾನ್ಯ ಬೆಳ್ಳುಳ್ಳಿಗೆ 400 ರಿಂದ 450 ರುಪಾಯಿಗೆ ಮಾರಾಟವಾಗುತ್ತಿದೆ. ಫಸ್ಟ್ಕ್ವಾಲಿಟಿ 450 ರಿಂದ 500 ರೂಪಾಯಿಗೆ ಮಾರಾಟವಾಗುತ್ತಿದ್ದರೆ, ಇತ್ತ ರಿಟೇಲ್ ಮಾರುಕಟ್ಟೆಯಲ್ಲಿ, ಅಂದರೆ ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣಪುಟ್ಟ ಮಾರುಕಟ್ಟೆಗಳಲ್ಲಿ ಸಾಮಾನ್ಯ ಬೆಳ್ಳುಳ್ಳಿ ಕೆಜಿಗೆ 450 ರಿಂದ 500 ರೂಪಾಯಿಗೆ ಮಾರಾಟವಾಗುತ್ತಿದೆ. ಫಸ್ಟ್ ಕ್ವಾಲಿಟಿ ಬೆಳ್ಳುಳ್ಳಿ ಕೆಜಿಗೆ 550 ರಿಂದ 600 ರೂಪಾಯಿವರೆಗೆ ಮಾರಾಟವಾಗುತ್ತಿದೆ.
ಒಟ್ಟಾರೆ ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆ ಹಿನ್ನೆಲೆಯಲ್ಲಿ ಬೆಳೆ ನಾಶವಾಗಿದೆ. ಇದರಿಂದ ಮಾರುಕಟ್ಟೆಗೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ದರ ಹೆಚ್ಚಳವಾಗಿದೆ.