ಬೆಂಗಳೂರು: ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮರಣಗಳಿಂದ ಸರ್ಕಾರ ನುಣಚಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಅವರು, ಈ ಮರಣಗಳಿಂದ ಸರ್ಕಾರ ನುಣಚಿಕೊಳ್ಳಲು ಸಾಧ್ಯವಿಲ್ಲ. ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು. ಹದಗೆಟ್ಟ ಆರೋಗ್ಯ ವ್ಯವಸ್ಥೆಯನ್ನು ಹಳಿಗೆ ತರುವ ಕೆಲಸ ತುರ್ತಾಗಿ ಆಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇನ್ನೂ ನನ್ನ ತಪ್ಪಿದ್ದರೆ ರಾಜೀನಾಮೆ ಕೊಡುವೆ ಎಂಬ ಆರೋಗ್ಯ ಸಚಿವರ ಹೇಳಿಕೆ ಅನಪೇಕ್ಷಿತ. ಜವಾಬ್ದಾರಿ ಕೊಟ್ಟಿರುವುದು ಕೈ ತೊಳೆದುಕೊಂಡು ಪಾರಾಗಲಿಕ್ಕಲ್ಲ. ಅಗತ್ಯವಿರುವುದು ರೋಗಗ್ರಸ್ತ ಆರೋಗ್ಯ ಇಲಾಖೆಗೆ ಸೂಕ್ತ ಚಿಕಿತ್ಸೆ. ಪಲಾಯನಕ್ಕಿಂತ ಪ್ರಾಯಶ್ಚಿತ್ತ ಮುಖ್ಯ. ಇಲಾಖೆಯನ್ನು ಸರಿ ಮಾಡುವುದು ಅವರ ಹೊಣೆ. ಗೃಹಲಕ್ಷ್ಮೀಯರ ಪಾಪ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.