ಮೈಸೂರು: ಮುಡಾ ಹಗರಣದ ಬಗ್ಗೆ ಒಂದೆಡೆ ಲೋಕಾಯುಕ್ತ, ಮತ್ತೊಂದೆಡೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದರೆ, ಇವುಗಳ ಮಧ್ಯೆ ಸರ್ಕಾರ ಕೂಡಾ ನ್ಯಾಯಾಂಗ ತನಿಖೆಗೆ ನೀಡಿದೆ. ಎಲ್ಲಾ ದಿಕ್ಕಿನಿಂದಲೂ ಎಲ್ಲಾ ಆಯಾಮದಲ್ಲೂ ತನಿಖೆ ಚುರುಕುಗೊಡಿದೆ. ಈಗಾಗಲೇ ಲೋಕಾಯುಕ್ತ ಪೊಲೀಸರು, ಸಿಎಂ ಸಿದ್ದರಾಮಯ್ಯ ಸೇರಿ ಎಲ್ಲ ಆರೋಪಿಗಳ ವಿಚಾರಣೆ ನಡೆಸಿದ್ದಾರೆ. ಇದೀಗ ಮುಡಾ ಹಗರಣ ಸಂಬಂಧ ಮೈಸೂರಿನ ವಕೀಲರೊಬ್ಬರು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ದೂರು ನೀಡಿದ್ದಾರೆ.
ವಕೀಲ ರವಿಕುಮಾರ್ ಜುಲೈ 19ರಂದೇ ಮುಡಾ ಹಗರಣ ಕುರಿತು ಪ್ರಧಾನಿ ಮೋದಿಗೆ 296 ಪುಟಗಳ ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ ಎಂಬುದು ತಿಳಿದುಬಂದಿದೆ. ಜತೆಗೆ, ಮುಡಾ ಹಗರಣದ ತನಿಖೆಯನ್ನು ಸಿಬಿಐ ವಹಿಸಿಕೊಳ್ಳುವಂತೆ ನಿರ್ದೇಶನ ನೀಡುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.ಮುಡಾ ಮಾಜಿ ಆಯುಕ್ತರಾದ ದಿನೇಶ್, ಡಿಬಿ ನಟೇಶ್ ವಿರುದ್ಧ ಆರೋಪ ಮಾಡಲಾಗಿದ್ದು,
ಇಬ್ಬರು ಸೇರಿ 100 ಕೋಟಿ ರೂಪಾಯಿಗೂ ಅಧಿಕ ಆರ್ಥಿಕ ನಷ್ಟ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಸೇಲ್ಡೀಡ್, ಸೆಟಲ್ಮೆಂಟ್ ಡೀಡ್ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದೆ. ದಿನೇಶ್ ಕುಮಾರ್ ಮತ್ತು ನಟೇಶ್ ಬೇನಾಮಿ ವಹಿವಾಟು ನಡೆಸಿದ್ದಾರೆ. ಅದಲ್ಲದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 2020 ರಿಂದ 50:50 ಅನುಪಾತದ ಆಧಾರದ ಮೇಲೆ ಪರಿಹಾರಾತ್ಮಕ ಬದಲಿ ಸೈಟ್ಗಳ ಹಂಚಿಕೆಯಲ್ಲಿ ಕೋಟ್ಯಂತರ ರೂಪಾಯಿಗಳ ಕಪ್ಪುಹಣದ ವಹಿವಾಟು ನಡೆದಿದೆ.
ಸುಮಾರು 5000 ಅಕ್ರಮ ನಿವೇಶನಗಳನ್ನು ಭೂಗಳ್ಳರಿಗೆ ಹಂಚಿಕೆ ಮಾಡಲಾಗಿದೆ. ರಾಜ್ಯದ ಆಸ್ತಿ ಅಥವಾ ಬೊಕ್ಕಸಕ್ಕೆ 4000 ಕೋಟಿಗೂ ಹೆಚ್ಚು ನಷ್ಟವಾಗಿದೆ. ಇದು ಮುಡಾ ಹಗರಣದ ಹಿಂದೆ ಪ್ರಬಲ ವ್ಯಕ್ತಿಗಳ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ. ಎಂದು ಉಲ್ಲೇಖಿಸಲಾಗಿದೆ. ಒಟ್ಟು 10 ಪುಟಗಳ ದೂರಿನ ಜತೆಗೆ 296 ಪುಟಗಳ ದಾಖಲೆಯನ್ನೂ ವಕೀಲ ರವಿಕುಮಾರ್ ಮೋದಿಗೆ ಕಳುಹಿಸಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.