ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಹಿಂದೆ ಸದನದಲ್ಲಿ ಕೂತು ಬಿಜೆಪಿಯ ಮೂವರು ಶಾಸಕರು ಬ್ಲೂ ಫಿಲಂ ವೀಕ್ಷಣೆ ಮಾಡಿ ಇಡೀ ದೇಶಾದ್ಯಂತ ಕರ್ನಾಟಕದ ಮಾನ ಮರ್ಯಾದೆಯನ್ನ ತೆಗೆದಿದ್ದರು. ಇದು ರಾಜ್ಯದ ಪಾಲಿಗೆ ಕಪ್ಪು ಚುಕ್ಕೆಯಾಗೇ ಉಳಿಕೊಂಡಿದೆ.
ಇದೀಗ ಮತ್ತೊಬ್ಬ ಜನಪ್ರತಿನಿಧಿ ಕಲಾಪದಲ್ಲಿ ಕುಳಿತು ಅಶ್ಲೀಲ ವಿಡಿಯೋ ನೋಡುವ ಮೂಲಕ ಸದನದ ಮಾನ ಹರಾಜು ಹಾಕಿದ ಘಟನೆ ಶುಕ್ರವಾರ ಸಂಭವಿಸಿದೆ.
ಇಂದು ವಿಧಾನಪರಿಷತ್ ಕಲಾಪ ನಡೆಯುತ್ತಿತ್ತು. ಕಾಂಗ್ರೆಸ್ ಎಂಎಲ್ಸಿ ಪ್ರಕಾಶ್ ರಾಥೋಡ್ ಅವರು ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ದೃಶ್ಯ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇಡೀ ರಾಜ್ಯವನ್ನು ಪ್ರತಿನಿಧಿಸುವ ಶಾಸಕರುಗಳು ಕೂರುವ ಪ್ರಜಾ ದೇಗುಲದಲ್ಲಿ ಇಂತಹ ಅಸಹ್ಯ ವರ್ತನೆ ತೋರಿದ ಎಂಎಲ್ಸಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ನೈತಿಕತೆಯ ಪ್ರಶ್ನೆಗೆ ಸ್ವತಃ ಆ ಎಂಎಲ್ಸಿ ಜತೆಗೆ ಕಾಂಗ್ರೆಸ್ ಪಕ್ಷದ ಮುಖಂಡರೂ ಸ್ಪಷ್ಟನೆ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ.
ಈ ಘಟನೆ ಕುರಿತು ವಿಜಯ ಸಾಕ್ಷಿ ವರದಿಗಾರನ ಜತೆ ಮಾತನಾಡಿದ ಪ್ರಕಾಶ್ ರಾಠೋಡ್, ನಾನು ಶೇ.100ಕ್ಕೆ 101ರಷ್ಟು ಹೇಳುವೆ, ಅಶ್ಲೀಲ ವಿಡಿಯೋ ನೋಡಿಲ್ಲ. ನೂರಾರು ಗ್ರೂಪ್ ಗಳಲ್ಲಿ ಇದ್ದೇನೆ. ಸಾವಿರಾರು ವಿಡಿಯೋ ಇವೆ. ಸ್ಟೋರೇಜ್ ಫುಲ್ ಆಗಿತ್ತು. ಅದನ್ನ ಡಿಲೀಟ್ ಮಾಡ್ತಿದ್ದೆ. ಅದು ಅಶ್ಲೀಲ ವಿಡಿಯೋನಾ? ಅನ್ನೋದೂ ನನಗೆ ಗೊತ್ತಿಲ್ಲ ಎಂದರು.
ವರದಿ. ಡಾ.ಅಬ್ದುಲ್ ರಜಾಕ್