ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಹಿಂಗಾರಿನ ರೈತರ ನೆಚ್ಚಿನ ಬೆಳೆ ಕಡಲೆಗೆ ಸಾಮಾನ್ಯವಾಗಿ ಬಾಧಿಸುವ ಕೀಟಬಾಧೆ ತಡೆಗಟ್ಟುವ ಕಾರ್ಯದಲ್ಲಿ ತಲ್ಲೀನರಾಗಿರುವ ರೈತರಿಗೀಗ ಈ ಬೆಳೆಗೆ ಫೆಂಗಲ್-ಫಂಗಸ್‌ನಿಂದ ನೆಟೆರೋಗ/ಸಿಡಿರೋಗ ಆವರಿಸಿ ಬಹುತೇಕ ಬೆಳೆ ಒಣಗುತ್ತಿರುವದರಿಂದ ರೈತರು ಚಿಂತೆಗೀಡಾಗಿದ್ದಾರೆ.
ಮುಂಗಾರಿನಲ್ಲಿ ಸಕಾಲಿಕ ಮಳೆಯಾಗದ್ದರಿಂದ ಹೆಸರು, ಶೇಂಗಾ ಬೆಳೆ ರೈತರಿಗೆ ಲಾಭ ತಂದುಕೊಡಲಿಲ್ಲ. ಹೆಸರು, ಶೇಂಗಾ ಬೆಳೆಯ ನಂತರ ಹಿಂಗಾರಿಗೆ ಬಹುತೇಕ ರೈತರು ಕಡಲೆ ಬಿತ್ತನೆ ಮಾಡಿದ್ದಾರೆ. ಹಿಂಗಾರಿನ ಬಿತ್ತನೆ ಸಮಯದಲ್ಲಿ ಮಳೆ ಬಿಡುವು ನೀಡದ್ದರಿಂದ ಬಿತ್ತನೆ ಕಾಲಾವಧಿಯಲ್ಲೂ ಬಹಳಷ್ಟು ವ್ಯತ್ಯಾಸವಾಗಿದೆ. ಕೆಲವರು ಅಕ್ಟೋಬರ್ ಮೊದಲ ವಾರ ಬಿತ್ತನೆ ಮಾಡಿದ್ದರೆ ಅನೇಕರು ನವಂಬರ್ ಮೊದಲ ವಾರ ಬಿತ್ತನೆ ಮಾಡಿದ್ದಾರೆ.
ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಲಕ್ಷೆö್ಮÃಶ್ವರ, ಅಡರಕಟ್ಟಿ, ಗೊಜನೂರ, ಮಾಗಡಿ, ಯಳವತ್ತಿ, ಮಾಡಳ್ಳಿ, ಯತ್ತಿನಹಳ್ಳಿ, ರಾಮಗೇರಿ, ಬೂದಿಹಾಳ, ಕೊಕ್ಕರಗೊಂದಿ, ಸೂರಣಗಿ, ಬಡ್ನಿ, ಗೊಜನೂರ, ಅಡರಕಟ್ಟಿ, ದೊಡ್ಡೂರ, ಶಿಗ್ಲಿ ಗ್ರಾಮ ವ್ಯಾಪ್ತಿಯ ಕಪ್ಪು ಮಣ್ಣಿನ 8950 ಹೆಕ್ಟೇರ್ ಜಮೀನುಗಳಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ. ಹಿಂಗಾರಿನ ವಾಣಿಜ್ಯ ಬೆಳೆ ಕಡಲೆ ಬೆಳೆಯ ಬಗ್ಗೆ ಹೆಚ್ಚು ನಿರೀಕ್ಷೆ ಹೊಂದಿರುವ ರೈತ ಸಮುದಾಯ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಸಿಗುವ ಔಷಧ ಗುಣಮಟ್ಟದ್ದಾಗಿರುವುದಿಲ್ಲ ಎಂಬ ಭಾವನೆಯಿಂದ ಖಾಸಗಿ ಕ್ರಿಮಿನಾಶಕ ಮಾರಾಟದ ಅಂಗಡಿಯಲ್ಲಿ ಹೆಚ್ಚು ಬೆಲೆಯ ಕ್ರಿಮಿನಾಶಕ/ಪೋಷಕಾಂಶ ಸಿಂಪರಣೆ ಮಾಡಿದ್ದಾರೆ. ಆದರೆ ಈಗ ಉತ್ತಮವಾಗಿಯೇ ಇದ್ದ ಬೆಳೆ ನೆಟೆಬೇರುಕೊಳೆ/ಸಿಡಿರೋಗದ ಸುಳಿಗೆ ಸಿಲುಕಿ ಒಣಗುತ್ತಿರುವ ಬೆಳೆ ಕಂಡು ಮಮ್ಮಲ ಮರುಗುತ್ತಿದ್ದಾರೆ.
ಹಿಂಗಾರಿನಲ್ಲಿ ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ಗುರಿ ಮೀರಿ ಬಿತ್ತನೆ ಮಾಡಿರುವ ತಾಲೂಕಿನ ಶೇ.೩೦ರಷ್ಟು ಕಡಲೆ ಬೆಳೆ ಸಿಡಿ ರೋಗದಿಂದ ಒಣಗುತ್ತಿದ್ದು, ಇದು ಇನ್ನೂ ವ್ಯಾಪಿಸುವ ಭೀತಿ ರೈತರನ್ನು ಕಾಡುತ್ತಿದೆ. ಬೀಜೋಪಚಾರ, ದುಬಾರಿ ಔಷಧ ಸಿಂಪರಣೆ ಮಾಡುತ್ತಿದ್ದರೂ ರೋಗ ನಿಯಂತ್ರಣಕ್ಕೆ ಬಾರದಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮುಂಗಾರಿನಲ್ಲಿ ಸಕಾಲಿಕ ಮಳೆಯಾಗದೇ ಮುಂಗಾರಿನ ಹೆಸರು, ಶೇಂಗಾ, ಹತ್ತಿ ಬೆಳೆಗಳು ಲಾಭ ತಂದುಕೊಡಲಿಲ್ಲ. ರೈತರ ನೆಚ್ಚಿನ, ನಿರೀಕ್ಷಿತ ಹಿಂಗಾರಿನಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ. ಜಮೀನು ಲಾವಣಿ, ಭೂಮಿ ಹದ ಮಾಡಿದ ಖರ್ಚು, ಗೊಬ್ಬರ, ಬೀಜ ಸಾವಿರಾರು ರೂ ಖರ್ಚು ಮಾಡಿ ಬಿತ್ತನೆ ಮಾಡಿರುವ ಬೆಳೆಗೆ ಇದೀಗ ಒಂದೂವರೆ ತಿಂಗಳದ್ದಾಗಿದ್ದು, 2 ಬಾರಿ ಕ್ರಿಮಿನಾಶಕ/ಪೋಷಕಾಂಶ ಸಿಂಪರಣೆ ಮಾಡಲಾಗಿದೆ. ಆದರೆ ಇದೀಗ ವಾಯುಭಾರ ಕುಸಿತದಿಂದ ಅಕಾಲಿಕ ಮಳೆ, ವ್ಯತಿರಿಕ್ತ ಹವಾಮಾನದಿಂದ ನೆಟೆ/ಸಿಡಿ ರೋಗಭಾದೆಯಿಂದ ಸಮೃದ್ಧವಾಗಿ ಬೆಳೆದ ಬೆಳೆ ಒಣಗುತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಹಿಂಗಾರು ಬೆಳೆಹಾನಿಗೆ ಪರಿಹಾರ ಕಲ್ಪಿಸಬೇಕು.
– ಬಸವರಾಜ ಮೆಣಸಿನಕಾಯಿ.
ರೈತರು.
ಚಳಿಗಾಲದ ಸೂಕ್ತ ವಾತಾವರಣದಿಂದ ಬೆಳೇಯುವ ಕಡಲೆ ಬೆಳೆಗೆ ವಾಯುಭಾರ ಕುಸಿತದ ಹವಾಮಾನ ವೈಪರಿತ್ಯ ಮಾರಕವಾಗಿದೆ. ಅಕಾಲಿಕ ಮಳೆ/ವ್ಯತಿರಿಕ್ತ ಹವಾಮಾನದಿಂದ ಭೂಮಿಯಲ್ಲಿ ಬೆಳೆಯ ಬೇರು ಕಡಿಯುವ ಶಿಲೀಂದ್ರಗಳ ಸಂಖ್ಯೆ ಹೆಚ್ಚುತ್ತದೆ. ಆವರಿಸಿರುವ ಸಿಡಿ ರೋಗಬಾಧೆ ತಡೆಗಟ್ಟುವುದು ಕಷ್ಟಸಾಧ್ಯ. ಆದಾಗ್ಯೂ ರೋಗ ನಿಯಂತ್ರಣಕ್ಕಾಗಿ ಸಕಾಲಿಕ ಔಷಧೋಪಚಾರ ಮಾಡಲೇಬೇಕು. ಹೆಚ್ಚಿನ ಮಾಹಿತಿಗಾಗಿ ಕೃಷಿ ಅಧಿಕಾರಿ/ಕೃಷಿ ತಜ್ಞರನ್ನು ಸಂಪರ್ಕಿಸಬೇಕು.
-ಚಂದ್ರಶೇಖರ ನರಸಮ್ಮನವರ.
ಕೃಷಿ ಅಧಿಕಾರಿ.