ವಿಜಯಸಾಕ್ಷಿ ಸುದ್ದಿ, ಗದಗ:ಚನವಜಾತ ಮತ್ತು ವರ್ಷದೊಳಗಿನ ಮಕ್ಕಳನ್ನು ಪಾಲಕ-ಪೋಷಕರು, ಆಯಾಗಳು ಅತ್ಯಂತ ಜಾಗೃತಿಯಿಂದ ಆರೈಕೆ ಮಾಡುವ ಅಗತ್ಯವಿದೆ ಎಂದು ಗದುಗಿನ ಚಿಕ್ಕಮಕ್ಕಳ ತಜ್ಞ ಡಾ.ಶಿವನಗೌಡ ಜೋಳದರಾಶಿ ಹೇಳಿದರು.
ಅವರು ಬೆಟಗೇರಿಯ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಗುರುವಾರ ದತ್ತು ಕೇಂದ್ರದಲ್ಲಿ ಮಕ್ಕಳ ಆರೈಕೆಯ ಸೇವೆಯಲ್ಲಿರುವ ಆಯಾಗಳಿಗೆ ಏರ್ಪಡಿಸಿದ್ದ ‘ಬಾಲ ಮಕ್ಕಳ ಆರೈಕೆಯಲ್ಲಿ ಆಯಾಗಳ ಪಾತ್ರ’ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.
ನವಜಾತ ಶಿಶುವಿಗೆ ಹುಟ್ಟಿದ ತಕ್ಷಣ ಮತ್ತು ಮೊದಲ 28 ದಿನಗಳವರೆಗೆ ಕೆಲವು ಆರೈಕೆಗಳು ಅತ್ಯಗತ್ಯವಾಗಿರುತ್ತವೆ. ವೈದ್ಯಕೀಯ ಅಧ್ಯಯನದ ಪ್ರಕಾರ, ಉಪಚಾರವಿಲ್ಲದೆ ವರ್ಷಗೊಳಗಿನ ಪ್ರತಿ 10 ಮಕ್ಕಳಲ್ಲಿ 5 ಮಕ್ಕಳು ಮೊದಲ 28 ದಿನ ತುಂಬುವುದರೊಳಗೆ ಮರಣ ಹೊಂದುತ್ತವೆ ಎಂದು ವಿವರಿಸಿದರು.
ಮಗುವನ್ನು ಬೆಚ್ಚಗಿಡುವದು, ಸ್ನಾನ ಮಾಡಿಸುವ, ಮಲಗಿಸುವ ವಿಧಾನವನ್ನು ವಿವರಿಸಿದರಲ್ಲದೆ, ಮಗುವಿಗೆ ಹಾಲು, ಗಂಜಿ ಕುಡಿಸುವ ಬಗೆ, ವರ್ಷದ ಮಗುವಿಗೆ ಆಹಾರ ನೀಡಬೇಕಾದ ವಿಧಾನ, ಅನಾರೋಗ್ಯದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಹಾಗೂ ವೈದ್ಯರ ಬಳಿ ಹೋಗುವಾಗ ಮಾಡಿಕೊಳ್ಳಬೇಕಾದ ಸಿದ್ಧತೆಗಳನ್ನು ವಿವರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಅವರು ಡಾ. ಶಿವನಗೌಡ ಜೋಳದರಾಶಿಯವರ ಸಾಮಾಜಿಕ ಕಳಕಳಿ ಹಾಗೂ ದತ್ತು ಕೇಂದ್ರದ ಹಾಗೂ ಮಕ್ಕಳ ಮೇಲಿರುವ ಕಾಳಜಿಯನ್ನು ಬಣ್ಣಿಸಿದರು.
ವೇದಿಕೆಯ ಮೇಲೆ ದತ್ತು ಕೇಂದ್ರದ ಮಾಜಿ ಅಧ್ಯಕ್ಷ ಮಂಜುನಾಥ ಚನ್ನಪ್ಪನವರ, ಡಾ. ಶ್ವೇತಾ ಪಾಟೀಲ, ಬಿ.ಬಿ. ಕೆಂಚರಡ್ಡಿ, ಶಾರದಮ್ಮ ಜೋಳದರಾಶಿ ಉಪಸ್ಥಿತರಿದ್ದರು. ಆಯಾಗಳಾದ ನೀಲವ್ವ ರೊಟ್ಟಿ, ಪಾರವ್ವ ಹಿರೇಮಠ, ಸರೋಜಾ ಕುಂದಗೋಳ, ಸುಂದರಾಬಾಯಿ ಅರವಟಗಿ, ಸುಶೀಲಾ ಬಡಿಗೇರ, ಸುವರ್ಣಾ ಬಾರಕೇರ, ಬಸವ್ವ ಶ್ಯಾವಿ ವೈದ್ಯರುಗಳಿಂದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡರು.
ನರಸಿಂಹ ಕಾಮಾರ್ತಿ ನಿರೂಪಿಸಿದರು. ಲಲಿತಾಬಾಯಿ ಮೇರವಾಡೆ ವಂದಿಸಿದರು. ಆಶಿಸ್ ತೋನ್ನಿವಾಲ, ಮಾಧುಸಾ ಮೇರವಾಡೆ, ಶಿವಾನಂದ ಮುಳಗುಂದ, ಸತೀಶ್ ರಾಹುತರ ಉಪಸ್ಥಿತರಿದ್ದರು.
ದತ್ತು ಕೇಂದ್ರದಲ್ಲಿ ಮಕ್ಕಳ ಆರೈಕೆಯ ಸೇವೆಯಲ್ಲಿರುವ ಆಯಾಗಳ ಪಾತ್ರ ಅತ್ಯಂತ ಜವಾಬ್ದಾರಿಯಿಂದ ಕೂಡಿರುತ್ತದೆ. ಆಯಾಗಳು ಮಗುವಿಗೆ ಮಾತೃ ವಾತ್ಸಲ್ಯ ನೀಡಬೇಕು. ಮಗುವಿನ ಹಸಿವು-ನಿದ್ರೆಗಳಿಗೆ ಸಕಾಲಕ್ಕೆ ವ್ಯವಸ್ಥೆ ಮಾಡಬೇಕು. ಪರಿತ್ಯಕ್ತ ಮಕ್ಕಳ ಸೇವೆಯಲ್ಲಿರುವ ಆಯಾಗಳ ಪಾತ್ರ ಹಿರಿದಾದದ್ದು ಮತ್ತು ಗೌರವಯುತವಾದದ್ದು. ತಾಯಿ ಇಲ್ಲದ ಮಕ್ಕಳಿಗೆ ಆಯಾಗಳು ನಿರ್ವಹಿಸುವ ತಾಯಿಯ ಪಾತ್ರ ನೀಜಕ್ಕೂ ಮನ ಮಿಡಿಯುವಂತದ್ದು ಎಂದು ಹೇಳಿದ ಡಾ.ಶಿವನಗೌಡ ಜೋಳದರಾಶಿ, ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯ ಕಾರ್ಯ ವೈಖರಿಯನ್ನು ಹಾಗೂ ಆಯಾಗಳ ಸೇವೆಯನ್ನು ಶ್ಲಾಘಿಸಿ, ಎಲ್ಲ ಆಯಾಗಳನ್ನು ಗೌರವಿಸಿದರು.