ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಬಳ್ಳಾರಿಯ ಖ್ಯಾತ ಕಲಾವಿದೆ ಮಂಜಮ್ಮ ಜೋಗತಿ ಅವರನ್ನು ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಹಾಗೂ ಧರ್ಮಪತ್ನಿ ಲಕ್ಷ್ಮೀ ಅರುಣಾ ಅವರು ಸನ್ಮಾನಿಸಿ ಗೌರವಿಸಿದರು.
ಬೆಂಗಳೂರಿನ ತಮ್ಮ ನಿವಾಸಕ್ಕೆ ಮಂಜಮ್ಮ ಜೋಗತಿ ಅವರನ್ನು ಆಹ್ವಾನಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜನಾರ್ಧನ ರೆಡ್ಡಿ ಮಾತನಾಡಿ, ಕಳೆದ 20 ವರ್ಷಗಳ ಹಿಂದೆ ಬಳ್ಳಾರಿಯಲ್ಲಿ ಮೊದಲ ಬಾರಿಗೆ ನಾವು ನಗರಸಭೆಯ ಆಡಳಿತದ ಚುಕ್ಕಾಣಿ ಹಿಡಿದಿದ್ದೆವು. ಆಗ ನಗರಸಭೆಯ ಪಾರ್ಕ್ ವೊಂದರ ಉದ್ಘಾಟನಾ ಸಮಾರಂಭದಲ್ಲಿ ಮಂಜಮ್ಮನವರು ಅದ್ಭುತ ನೃತ್ಯ ಪ್ರದರ್ಶಿಸಿದ್ದರು. ನಾನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವನಾದ ಸಂದರ್ಭದಲ್ಲಿಯೇ ಮಂಜಮ್ಮ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಅವಕಾಶ ದೊರಕಿತು. ಇದು ನನ್ನ ಅದೃಷ್ಟವೆಂದು ಭಾವಿಸುತ್ತೇನೆ ಎಂದು ಮಾಜಿ ಸಚಿವ ಜನಾರ್ಧನರೆಡ್ಡಿ ಹರ್ಷ ವ್ಯಕ್ತಪಡಿಸಿದರು.
ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ದಂಪತಿಗಳಿಂದ ಸನ್ಮಾನ ಸ್ವೀಕರಿಸುತ್ತಿದ್ದಂತೆ, ಭಾವುಕರಾದ ಮಂಜಮ್ಮ ಜೋಗತಿಯವರ ಕಣ್ಣು ತೇವಗೊಂಡವು.
ಬಳಿಕ ಮಾತನಾಡಿ, 20 ವರ್ಷಗಳ ಹಿಂದೆ ಕಲೆಗೆ ಪ್ರೋತ್ಸಾಹಿಸಿದ ತಾವು ಸಚಿವರಾಗಿದ್ದ ಸಂದರ್ಭದಲ್ಲಿ ಒಂದೇ ಒಂದು ಮನವಿಗೆ ನನಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯುವಂತೆ ಮಾಡಿದಿರಿ ಎಂದು ನೆನೆದರು. ಅಲ್ಲದೇ, ರೆಡ್ಡಿ ಅವರಿಗೆ ಬಂದಿರುವ ಕಷ್ಟಗಳನ್ನು ನೆನಪಿಸಿಕೊಂಡು ಗದ್ಗಧಿತರಾದರ ಮಂಜಮ್ಮರನ್ನು ಪಕ್ಕದಲ್ಲಿಯೇ ಇದ್ದ ಜನಾರ್ಧನ ರೆಡ್ಡಿ ಸಂತೈಸಿದರು.
ಇದೇ ಸರ್ಕಾರದಲ್ಲಿ ಜಾನಪದ ಅಕಾಡೆಮಿ ಅಧ್ಯಕ್ಷ ಸ್ಥಾನ, ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿತು. ಇದೀಗ ಮತ್ತದೇ ಸರ್ಕಾರದಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆಯುತ್ತಿರುವುದು ಸಂತಸ ತಂದಿದೆ ಎಂದು ಮಂಜಮ್ಮ ಜೋಗತಿ ಖುಷಿ ಪಟ್ಟರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಇದ್ದರು.