ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಮತಕ್ಷೇತ್ರದಲ್ಲಿ 200 ಕೋಟಿ ರೂಗಳ ವೆಚ್ಚದಲ್ಲಿ ಜರುಗುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಲವು ಸಚಿವರು, ಮುಖಂಡರ ಆಗಮನದ ಹಿನ್ನೆಲೆಯಲ್ಲಿ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಡಿ.15ರಂದು ಬೆಳಿಗ್ಗೆ 11.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರೋಣ ಮತಕ್ಷೇತ್ರದ ಹರ್ಲಾಪೂರ ಗ್ರಾಮದಿಂದ ಹೆಲಿಕ್ಯಾಪ್ಟರ್ ಮೂಲಕ ರೋಣ ಪಟ್ಟಣದ ಡಿ’ಪೌಲ್ ಶಾಲಾ ಆವರಣಕ್ಕೆ ಅಗಮಿಸಲಿದ್ದು, ಅಲ್ಲಿಂದ ನೆರವಾಗಿ ಸಮಾವೇಶ ನಡೆಯುವ ಸ್ಥಳವಾದ ತಾಲೂಕಾ ಕ್ರೀಡಾಂಗಣಕ್ಕೆ ಬರಲಿದ್ದಾರೆ. ಇವರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರಾದ ಬೈರತಿ ಸುರೇಶ, ಜಮೀರ್ ಅಹ್ಮದ ಖಾನ್, ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ ಜಾರಕಿಹೊಳಿ, ಲಕ್ಷ್ಮಣ ಸವದಿ, ಸಲೀಮ ಅಹ್ಮದ ಸೇರಿದಂತೆ ಅನೇಕ ಸಚಿವರು, ಶಾಸಕರು, ಲೋಕಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು ಆಗಮಿಸಲಿದ್ದು, ನಿರೀಕ್ಷೆ ಮೀರಿ ಜನ ಸೇರಬಹುದು ಎಂದು ಅಂದಾಜಿಸಲಾಗಿದೆ.
ಈ ಮೊದಲು ನಿರೀಕ್ಷೆ ಮಾಡಿದಂತೆ 50 ಸಾವಿರಕ್ಕೂ ಹೆಚ್ಚು ಜನರು ಸೇರಬಹುದು ಎಂಬ ಅಂದಾಜನ್ನು ಇಟ್ಟುಕೊಂಡು ಬೃಹತ್ ಪೆಂಡಾಲ್ ಹಾಕಲಾಗಿದೆ. ೩೫ ಸಾವಿರ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ, ಸಮಾವೇಶಕ್ಕೆ ಬರುವ ಜನರಿಗೆ ೩೦ ಪ್ರತ್ಯೇಕ ಕೌಂಟರ್‌ಗಳನ್ನು ನಿರ್ಮಿಸಿ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಶುದ್ಧ ಕುಡಿಯುವ ನೀರು ಪೂರೈಕೆಗೂ ಕ್ರಮ ವಹಿಸಲಾಗಿದೆ.
ಮುಖ್ಯವಾಗಿ ರಾಜ್ಯ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಲು 20ಕ್ಕೂ ಹೆಚ್ಚು ಸ್ಟಾಲ್‌ಗಳನ್ನು ನಿರ್ಮಿಸಲಾಗಿದೆ. ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಸ್ಥಳದಲ್ಲಿಯೇ ಬಿಡಾರ ಹೂಡಿದ್ದು, ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದಾರೆ. ಒಟ್ಟಿನಲ್ಲಿ, ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಂಗೋಲಿಯ ಚಿತ್ತಾರಗಳು ವೇದಿಕೆಯ ಎದುರು ಸಿದ್ಧವಾಗುತ್ತಿದೆ.
200 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾರ್ಯಕ್ರಮಗಳ ಈ ಸಮಾವೇಶ ಐತಿಹಾಸಿಕ ಸಮಾವೇಶವಾಗಿದೆ. ನಮ್ಮ ನಿರೀಕ್ಷೆಗಿಂತಲೂ ಹೆಚ್ಚಿನ ಜನರು ಸೇರಲಿದ್ದು, ರಾಜ್ಯದ ಸರಕಾರದ ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನಾಗರಿಕ ಸಮುದಾಯ ಸಮಾವೇಶಕ್ಕೆ ಸ್ವಯಂ ಪ್ರೇರಣೆಯಿಂದ ಬರಲಿದ್ದಾರೆ.
– ಸಂಗನಗೌಡ (ಮಿಥುನ್)ಪಾಟೀಲ,
ವ್ಹಿ.ಆರ್. ಗುಡಿಸಾಗರ, ಹಿರಿಯ ಮುಖಂಡರು.